ಸರ್ಕಾರದಿಂದ ಉಚಿತ ಸಿಐಟಿ ತರಬೇತಿ

02 YERRISWAMY 03
Published on

ಬಳ್ಳಾರಿ : ರಾಜ್ಯ ಸರ್ಕಾರದಿಂದ ಈ ವರ್ಷ 25 ಸಾವಿರ ಬಡ ವಿದ್ಯಾರ್ಥಿಗಳಿಗೆ ಉಚಿತ ಸಿಐಟಿ ತರಬೇತಿ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಂಡೂರು ತಾಲೂಕಿನ ಜಿಂದಾಲ್‌ನಲ್ಲಿ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗ, ಜೆಎಸ್‌ಡಬ್ಲೂ ಫೌಂಡೇಶನ್ ಸಹಯೋಗದೊಂದಿಗೆ ಎರಡನೇ ದಿನದ ಎಜುಕಾನ್ ಶೈಕ್ಷಣಿಕ ಸಮಾವೇಶದ ಕಾರ್ಯಕ್ರಮ ಮಾತನಾಡಿದರು. ಈಗಾಗಲೇ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದಕ್ಕಾಗಿ 12 ಕೋಟಿ ರೂ. ಅನುದಾನ ನೀಡಲಾಗುವುದು. ರಾಜ್ಯದಲ್ಲಿ ಈಗಾಗಲೇ 42,500 ಅತಿಥಿ ಶಿಕ್ಷಕರನ್ನು ನೇಮಿಸಲಾಗಿದ್ದು, ಇದರಲ್ಲಿ ಕಕ ವ್ಯಾಪ್ತಿಯಲ್ಲಿ 11,600 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಲು ಪೋಷಕರು ತಪ್ಪದೇ ಶಾಲೆಗಳಿಗೆ ಕಳುಹಿಸಬೇಕು. ಇದರ ಜವಾಬ್ದಾರಿಯನ್ನು ಎಸ್‌ಡಿಎಂಸಿಯವರು ವಹಿಸಬೇಕು ಎಂದರು. ಕಳೆದ ವರ್ಷದಿಂದ ಮೂರು ಪರೀಕ್ಷೆಗಳನ್ನು ಪರಿಚಯಿಸಿದ ಪರಿಣಾಮ ಅನುತ್ತೀರ್ಣತೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮೂರೂ ಪರೀಕ್ಷೆಗಳಲ್ಲೂ ತೇರ್ಗಡೆಯಾಗದೆ ಒಂದು ವರ್ಷ ಮನೆಯಲ್ಲೇ ಉಳಿಯುವ ವಿದ್ಯಾರ್ಥಿಗಳಿಗೆ ಮರು ದಾಖಲು ಮಾಡಿಕೊಳ್ಳಲಾಗುತ್ತಿದೆ. ಎಸ್‌ಎಸ್‌ಎಲ್‌ಸಿಗೆ ಮರು ದಾಖಲಾಗುವ ಮಕ್ಕಳಿಗೆ ಇತರೆ ಮಕ್ಕಳಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು. ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಇನ್ನು ಮುಂದೆ ವಾರದ 6 ದಿನವೂ ಮೊಟ್ಟೆ ನೀಡಲಾಗುತ್ತದೆ. ಸರ್ಕಾರ ಈಗಾಗಲೇ ವಾರದಲ್ಲಿ 2 ದಿನ ಮೊಟ್ಟೆ ನೀಡುತ್ತಿತ್ತು. ಇದರ ಜತೆಗೆ ಉಳಿದ 4 ದಿನ ಮೊಟ್ಟೆ ನೀಡಲು ಅಜೀಂ ಪ್ರೇಮ್‌ಜೀ ಫೌಂಡೇಷನ್ ಮುಂದೆ ಬಂದಿದೆ. ರಾಜ್ಯದಲ್ಲಿ ಸುಮಾರು 6 ಸಾವಿರ ಗ್ರಾಪಂಗಳಿದ್ದು, ಎರಡು ಗ್ರಾಪಂ ಗಳಂತೆ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲಾಗುವುದು. ಈ ಬಾರಿ 600 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net