

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿನಿಯರು ಸರ್ಕಾರ ಒದಗಿಸಿದ ಮಹಿಳಾ ಮೀಸಲಾತಿಯ ಸದುಪಯೋಗ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.
ನಗರದ ವನಿತಾ ಸೇವಾ ಸಮಾಜದ ವನಿತಾ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಪೂರ್ವ ಹಂತದಲ್ಲಿ ಸ್ಪರ್ಧಾತ್ಮಕ ಮನೋಭಾವ ಹೊಂದಿ ನಾಗರಿಕ ಸೇವೆ ಪರೀಕ್ಷೆ ಎದುರಿಸಿ ಉನ್ನತ ಹುದ್ದೆ ಪಡೆಯಲು ಶ್ರಮಿಸಬೇಕು. ಇಂದಿನ ಶಿಕ್ಷಣದ ವ್ಯಾಪಾರೀಕರಣ ಮಧ್ಯೆಯೂ ಭಾಗೀರಥಿಬಾಯಿ ಆದರ್ಶ ಇಟ್ಟುಕೊಂಡು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ವನಿತಾ ಸೇವಾ ಸಮಾಜದ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ. ನಾನೂ ಆಡಳಿತ ಮಂಡಳಿ ಕಾರ್ಯಕ್ಕೆ ಕೈ ಜೋಡಿಸುವೆ ಎಂದರು.
ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್. ಪಾಟೀಲ ಮಾತನಾಡಿ, ವಿದ್ಯಾರ್ಥಿನಿಯರು ಅಭ್ಯಾಸದತ್ತ ಗಮನ ನೀಡಿ ಮುಂಬರುವ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಸೇವಾ ಸಮಾಜದ ಉಪಾಧ್ಯಕ್ಷೆ ರಾಧಿಕಾ ಕುಲಕರ್ಣಿ, ಕಾರ್ಯದರ್ಶಿ ಮಧುರಾ ಹೆಗಡೆ, ನಿರ್ದೇಶಕ ದಾನಪ್ಪ ಕಬ್ಬೇರ, ಕಾಲೇಜಿನ ಪ್ರಾಚಾರ್ಯ ಆರ್.ಬಿ.ದೊಡಮನಿ, ನಾಗರತ್ನ ಬಾರ್ಕಿ, ಉಪನ್ಯಾಸಕರು ವಿದ್ಯಾರ್ಥಿಗಳು, ಇತರರು ಇದ್ದರು.
ಉಪನ್ಯಾಸಕರಾದ ಹೇಮಾ ಕಮ್ಮಾರ, ಪವಿತ್ರಾ ಬಡವಣ್ಣವರ, ವಾಗೀಶ ಚವಡಿ, ಸಂತೋಷ ಕಲಕೇರಿ, ರೇಣುಕಾಚಾರ್ಯ ಹಿರೇಮಠ ದೀಪದಾನ ಕಾರ್ಯಕ್ರಮ ನಡೆಸಿಕೊಟ್ಟರು. ನೀಲಗಂಗಾ ಕರಿ ಪ್ರಾಸ್ತಾವಿಕವಾಗಿ ಮಾತನಾಡಿದರು.