

ಬೆಟ್ಟದಪುರ: ಸರ್ಕಾರದ ಸೌಲಭ್ಯಗಳು ತಾಲೂಕಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ವಿಶೇಷ ಗಮನಹರಿಸಲಾಗುತ್ತಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಸಮೀಪದ ಚಾಮರಾಯನಕೋಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಇರುವ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಿಂದ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇವು ಸಮಪರ್ಕವಾಗಿ ಅವರಿಗೆ ಸಿಗುತ್ತಿದೆಯೇ ಅಥವಾ ಸಮಸ್ಯೆ ಊಂಟಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆದು ಅವರಿಗೆ ಸೂಚನೆ ನೀಡಲಾಗುತ್ತಿದೆ. ಈ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡದ ಕೊರತೆ ಇತ್ತು. 16.50 ಲಕ್ಷ ರೂ. ವೆಚ್ಚದ ಕೇಂದ್ರವನ್ನು ನಿರ್ಮಿಸಿ ಉದ್ಘಾಟನೆ ಮಾಡಲಾಗಿದೆ. ಕೇಂದ್ರದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹೆಚ್ಚಿನ ಮಕ್ಕಳನ್ನು ದಾಖಲು ಮಾಡುವ ಮೂಲಕ ಎಲ್ಲರಿಗೂ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಮತಾ, ಮೇಲ್ವಿಚಾರಕಿಯರಾದ ಶ್ವೇತಾ, ಸವಿತಾ, ಮೈಸೂರು ನಿರ್ಮಿತಿ ಕೇಂದ್ರದ ಇಂಜಿನಿಯರ್ ರಕ್ಷಿತ್, ಗುತ್ತಿಗೆದಾರ ಪುಟ್ಟರಾಜು ಇತರರಿದ್ದರು.