

ಚಿಕ್ಕಬಳ್ಳಾಪುರ: ಕರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಾಧನೆ ಘೋಷಣೆಗೇ ಸೀಮಿತವಾಗಿದೆ ಎಂದು ಸಂಯುಕ್ತ ಜನತಾ ದಳದ (ಜೆಡಿಯು) ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಡಳಿತ ಭವನದವರೆಗೂ ಜೆಡಿಯು ಬುಧವಾರ ಕೈಗೊಂಡಿದ್ದ ಜ್ಯೋತಿಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ಖಜಾನೆ ಖಾಲಿಯಾಗಿದೆ, ಕರೊನಾ ನಿಯಂತ್ರಣಕ್ಕೆ ಅಗತ್ಯ ಸೌಕರ್ಯ, ಅಭಿವೃದ್ಧಿ ಕೆಲಸ ಕೈಗೊಳ್ಳಲು ಹಣ ಇಲ್ಲ. ಘೋಷಣೆಯಲ್ಲಿ ಸಾಧನೆ ಹೇಳಿಕೊಳ್ಳುತ್ತಿದ್ದಾರೆಯೇ ಹೊರತು ಸವಲತ್ತುಗಳು ಜನರನ್ನು ತಲುಪುತ್ತಿಲ್ಲ ಎಂದು ಟೀಕಿಸಿದರು.
ಜನರನ್ನು ಎಚ್ಚರಿಸುವುದರ ಜತೆಗೆ ಆಡಳಿತಕ್ಕೆ ಚುರುಕು ಮುಟ್ಟಿಸಲು ಜ್ಯೋತಿಯಾತ್ರೆ ಕೈಗೊಳ್ಳಲಾಗಿದೆ. ಈ ಮೂಲಕ ಜನಪರ ವ್ಯವಸ್ಥೆ ಕಟ್ಟಲು ಶ್ರಮಿಸುವುದಾಗಿ ಪಟೇಲ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ 13 ವರ್ಷ ಕಳೆದರೂ ನಿರೀಕ್ಷೆಗೆ ಅನುಗುಣವಾಗಿ ಅಭಿವೃದ್ಧಿ ಕಂಡಿಲ್ಲ. ಶಾಶ್ವತ ನೀರಾವರಿ ಯೋಜನೆಗಳನ್ನು ತುರ್ತಾಗಿ ಅನುಷ್ಠಾನಗೊಳಿಸಬೇಕಾಗಿದೆ. ಕೃಷಿ ಉತ್ಪನ್ನಗಳಿಗೆ ನಿರ್ವಹಣೆ ವೆಚ್ಚ ಲೆಕ್ಕಾಚಾರದಲ್ಲಿ ಸೂಕ್ತ ಬೆಲೆ ಸಿಗಬೇಕಿದೆ ಎಂದು ಜಿಲ್ಲಾ ಜೆಡಿಯು ಅಧ್ಯಕ್ಷ ಲಕ್ಷ್ಮೀನಾರಾಯಣ ಒತ್ತಾಯಿಸಿದರು.
ಕೃಷಿ ಉತ್ಪನ್ನಗಳ ದಾಸ್ತಾನಿಗೆ ಉಗ್ರಾಣಗಳ ನಿರ್ಮಾಣ, ಭೂ ಸುಧಾರಣೆ ಕಾಯ್ದೆಯನ್ನು ರೈತರ ಪರವಾಗಿ ತಿದ್ದುಪಡಿ ಮಾಡುವುದು, ಕರೊನಾ ಸೋಂಕಿನಿಂದ ಮೃತಪಟ್ಟವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯ ಜೆಡಿಯು ಯುವ ಘಟಕ ಅಧ್ಯಕ್ಷ ಡಾ ಕೆ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಶಿವರಾಮ್, ಗೌರವಾಧ್ಯಕ್ಷ ಲತನ್ ಎಸ್.ಸುರೇಶ್ ಇತರರಿದ್ದರು.