ಸರ್ಕಾರದ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಳ್ಳಿ

20skpp1
Published on

ಸಕಲೇಶಪುರ: ಕಾರ್ಮಿಕರು ಸರ್ಕಾರದ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಬೇಕೆಂದು ಶಾಸಕ ಸಿಮೆಂಟ್ ಮಂಜು ಸಲಹೆ ನೀಡಿದರು.

ಪಟ್ಟಣದ ಪುರಭವನದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ವರ್ಗದ ಹಾಗೂ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಜಾರಿಯಲ್ಲಿರುವ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಕಾರ್ಮಿಕ ಕಾಯ್ದೆಗಳ ಬಗ್ಗೆ ತಾಲೂಕು ಮಟ್ಟದ ಕಾರ್ಯಾಗಾರ ಹಾಗೂ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಅಭಿವೃದ್ಧಿಗೆ ಬೆನ್ನೆಲುಬು ಕಾರ್ಮಿಕರಾಗಿದ್ದಾರೆ. ಭಾರತ ವಿಶ್ವ ಗುರು ಆಗಬೇಕಾದರೆ ಹಾಗೂ ದೇಶ ಹೆಚ್ಚಿನ ಅಭಿವೃದ್ಧಿ ಕಾಣಬೇಕಾದರೆ ಕಾರ್ಮಿಕರ ಶ್ರಮ ಮುಖ್ಯ, ಕಾರ್ಮಿಕರ ಜೀವನ ಅತ್ಯಂತ ಕಷ್ಟಕರವಾಗಿದ್ದು, ಕೆಲಸ ಮಾಡುವಾಗ ಯಾವುದೇ ಸಂದರ್ಭದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕಾರ್ಮಿಕರ ಕುಟುಂಬದ ರಕ್ಷಣೆಗಾಗಿ ಹಾಗೂ ಕಾರ್ಮಿಕರ ಏಳಿಗೆಗಾಗಿ ಕಾರ್ಮಿಕ ಇಲಾಖೆ ವತಿಯಿಂದ ಹಲವು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳದಿದ್ದಲ್ಲಿ ಯಾವುದೇ ಯೋಜನೆಗಳನ್ನು ಪಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕಾರ್ಮಿಕರು ಮೊದಲಿಗೆ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಇಲಾಖೆಯ ಸೌಲಭ್ಯಗಳನ್ನು ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಕೆಲಸ ಮಾಡುವಾಗ ಅತಿ ಹೆಚ್ಚಿನ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಕಾರ್ಮಿಕ ಉಪ ಅಧೀಕ್ಷಕಿ ಯಮುನಾ, ಪುರಸಭಾ ಮುಖ್ಯಾಧಿಕಾರಿ ನಟರಾಜ್, ಪುರಸಭಾ ಸದಸ್ಯೆ ವನಜಾಕ್ಷಿ, ತಾಲೂಕು ಕಾರ್ಮಿಕ ಇಲಾಖೆಯ ಉಪ ನಿರೀಕ್ಷಕ ರವಿ, ಆಲೂರು ಕಾರ್ಮಿಕ ಇಲಾಖೆಯ ನಿರೀಕ್ಷಕ ಶಿವರಾಮ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net