

ಕೊಪ್ಪಳ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಸೆ.8ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಸಾವಿರಾರು ರೈತರ ಸಮ್ಮುಖದಲ್ಲಿ ಹೋರಾಟ ನಡೆಸಲಾಗುವುದೆಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲಂಕೇಶ ಗುಳದಾಳ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾದರೂ ಪರಿಹಾರ ನೀಡುತ್ತಿಲ್ಲ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ಪಾಲು ನಿಲ್ಲಿಸಲಾಗಿದೆ. ರೈತರ ಮಕ್ಕಳಿಗೆ ವರವಾಗಿದ್ದ ರೈತ ವಿದ್ಯಾನಿಧಿ ನಿಲ್ಲಿಸಿದ್ದಾರೆ. ಕಳೆದ 100 ದಿನದಲ್ಲಿ ರಾಜ್ಯದಲ್ಲಿ 42 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತ ಸಂಬಂಧಿ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ತಾವು ರೈತರ ಪರವಾಗಿರುವುದಾಗಿ ಹೇಳುತ್ತಾರೆಂದು ಆರೋಪಿಸಿದರು.
ರಾಜ್ಯ ನಾಯಕರ ಸೂಚನೆಯಂತೆ ಸೆ.8ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲೂ ಎಲ್ಲ ತಾಲೂಕಿನಿಂದ ಸಾವಿರಾರು ರೈತರು ಆಗಮಿಸಲಿದ್ದಾರೆ. ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಪರಿಹಾರ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮುಂದುವರೆಸಲಾಗುವುದೆಂದು ತಿಳಿಸಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ರಾಜ್ಯದಲ್ಲಿ 16 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಅವಶ್ಯವಿದೆ. 11 ಸಾವಿರ ಮೆ.ವ್ಯಾ. ಉತ್ಪಾದನೆಯಾಗುತ್ತಿದೆ. ಖರೀದಿಗೆ ಇವರ ಬಳಿ ದುಡ್ಡಿಲ್ಲ. ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ. ವಿದ್ಯುತ್ ಪರಿವರ್ತಕ ಸುಟ್ಟಿದ್ದು, ಬದಲಾಯಿಸುತ್ತಿಲ್ಲ. ಈ ಬಗ್ಗೆ ಶಾಸಕ ರಾಯರಡ್ಡಿ ಧ್ವನಿ ಎತ್ತಿದ್ದಾರೆ. ರೈತರ ಪರವಾಗಿ ಸಿಎಂಗೆ ಪತ್ರ ಬರದಿದ್ದಕ್ಕೆ ಸ್ವಾಗತಿಸುವೆ ಎಂದರು.
ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಂದಪ್ಪ ಯಲ್ಲಮ್ಮನವರ, ಮಹೇಶ ಹಾದಿಮನಿ ಇದ್ದರು.