

ಮಳವಳ್ಳಿ: ಬಗರ್ ಹುಕುಂ ಸಾಗುವಳಿದಾರರು ಮತ್ತು ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡದ ಸರ್ಕಾರ, ಬಂಡವಾಳ ಶಾಹಿಗಳಿಗೆ ನಾಡಿನ ಸಂಪತ್ತನ್ನು ನೀಡಲು ರೆಡ್‌ಕಾರ್ಪೆಟ್ ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಕಿಡಿಕಾರಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗುರುವಾರ ಆಯೋಜಿಸಿದ್ದ ಪ್ರತಿಭಟನಾ ರ‌್ಯಾಲಿಯಲ್ಲಿ ಮಾತನಾಡಿದ ಅವರು, ನಲವತೈದು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಬಡ ಸಾಗುವಳಿದಾರರು ಹಾಗೂ ನಿವೇಶನ ರಹಿತರಿಗೆ ನಿವೇಶನ, ವಸತಿ ನೀಡುವಲ್ಲಿ ಸರ್ಕಾರಕ್ಕೆ ವಿಫಲವಾಗಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮವೇಶ ನಡೆಸಿ ರಾಜ್ಯದ ಭೂ, ಜಲ ಸಂಪತ್ತನ್ನು ಹೇರಳವಾಗಿ ಬಂಡವಾಳಶಾಹಿಗಳಿಗೆ ನೀಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪಂಪ್‌ಸೆಟ್‌ಗಳಿಗೆ ಪೀಪೇಯ್ಡ್ ಮೀಟರ್ ಅಳವಡಿಸಿ ರೈತ ಕುಲ ನಾಶಮಾಡಲು ಸರ್ಕಾರ ಮುಂದಾಗಿದೆ. ಅನ್ನದಾತರ ಬದುಕಿನ ಮೇಲೆ ಬರೆ ಎಳೆಯುವ ವಿಧೇಯಕವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಪಟ್ಟಣದ ಸಾರಿಗೆ ನಿಲ್ದಾಣದ ಬಳಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ತಹಸೀಲ್ದಾರ್ ವಿಜಯಣ್ಣ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಲಿಂಗರಾಜಮೂರ್ತಿ, ಉಪಾಧ್ಯಕ್ಷೆ ಪಮೀಳಾ, ಮುಖಂಡರಾದ ಎ.ಎಲ್. ಶಿವಕು ಮಾರ್, ಚಿಕ್ಕಸ್ವಾಮಿ, ಗುರುಸ್ವಾಮಿ, ಶಿವಪ್ಪ, ಮರಿಲಿಂಗೇಗೌಡ, ಮಹಾದೇವ, ಸಿದ್ದರಾಜು, ಗಣೇಶ್, ಬೋರಯ್ಯ , ಪ್ರಕಾಶ್ ಇತರರಿದ್ದರು.
.