ಸರ್ಕಾರದ ವಿರುದ್ಧ ರೈತ ಸಂಘ ಪ್ರತಿಭಟನೆ

2 mlv 1
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಳವಳ್ಳಿ ತಾಲೂಕು ಕಚೇರಿ ಮುಂದೆ ಮೂಲ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಶಂಕರೇಗೌಡ, ಬಸವರಾಜು, ಮಹೇಶ್, ಬಸವಯ್ಯ, ಜಯರಾಮು, ಕೃಷ್ಣ, ಸಣ್ಣಪ್ಪ, ಅಣಸಾಲೆ ಬಸವಣ್ಣ, ರಾಮೇಗೌಡ, ರಾಮಲಿಂಗೇಗೌಡ ಇದ್ದರು.
Published on

ಮಳವಳ್ಳಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ರೈತರು ಹಾಗೂ ಜನಸಾಮಾನ್ಯರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಮೂಲ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅನ್ನದಾತರು ಬೆಳೆಗಳಿಗೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಅದರಲ್ಲೂ ಮಳವಳ್ಳಿ ತಾಲೂಕಿನ ಕೃಷಿ ಭೂಪ್ರದೇಶ ವಿಶ್ವೇರಯ್ಯ ನಾಲೆಯ ಕೊನೆಯ ಭಾಗದಲ್ಲಿರುವುದರಿಂದ ಅಣೆಕಟ್ಟೆ ಭರ್ತಿಯಾಗಿರುವಾಗಲೇ ಈ ಭಾಗದ ಬೆಳೆಗಳಿಗೆ ಸಮರ್ಪಕವಾಗಿ ನೀರು ತಲುಪದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೇ ರೀತಿ ನೀರು ಹರಿಸಿದರೆ ಕೆರೆ-ಕಟ್ಟೆಗಳಿಗೂ ನೀರು ತುಂಬಿಸಲಾಗದೆ ಜಾನುವಾರುಗಳಿಗೆ ಹಾಹಾಕಾರ ಉಂಟಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಕೊಳ್ಳದ ರೈತರು ಹಾಗೂ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆಗಳೇ ಹೆಚ್ಚಾಗುತ್ತಿದ್ದು, ವಸ್ತುಸ್ಥಿತಿಯನ್ನು ಕಾವೇರಿ ನೀರು ನಿರ್ವಹಣಾ ಸಲಹಾ ಮಂಡಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಪ್ರತಿದಿನ ನೀರು ಹರಿಸುತ್ತಿರುವುದರಿಂದ ಜನಾಕ್ರೋಶ ಹತ್ತಿಕ್ಕಲು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗಾಗಿ ಲಕ್ಷಾಂತರ ಮಹಿಳೆಯರನ್ನು ಸೇರಿಸಿ ಎರಡು ಸಾವಿರ ಹಣ ಕೊಡುತ್ತಿದ್ದೇವೆಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದೆ. ಇದೇ ರೀತಿ ಮುಂದುವರಿದರೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದ್ದು, ರೈತರು ಧಂಗೆ ಹೇಳುವ ಮೊದಲು ಜನಹಿತ ಕಾಯುವ ನಿರ್ಣಯ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಇದಕ್ಕೂ ಮೊದಲು ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅನಂತ್ ರಾಮ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.

ಹೋರಾಟಗಾರ ಮುಖಂಡರಾದ ದೇವಿಪುರ ಬಸವರಾಜು, ಮಹೇಶ್, ಬಸವಯ್ಯ, ಜಯರಾಮು, ಕೃಷ್ಣ, ಸಣ್ಣಪ್ಪ, ಅಣಸಾಲೆ ಬಸವಣ್ಣ, ರಾಮೇಗೌಡ, ರಾಮಲಿಂಗೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net