

ಹಾಸನ: ಸಾಲ ವಸೂಲಾತಿಗಾಗಿ ಬ್ಯಾಂಕುಗಳು ಇ-ಟೆಂಡರ್ ಮೂಲಕ ಹರಾಜು ಮಾಡಿ ರೈತರಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಡನೆ ನಡೆಸಿದ ರೈತರ ಮೇಲೆ ದೌರ್ಜನ್ಯ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ
ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಎನ್.ಆರ್.ವೃತ್ತದಲ್ಲಿರುವ ಕೆನರಾ ಬ್ಯಾಂಕ್ ಮುಂದೆ ಪ್ರತಿಭಟಿಸಿ ನಂತರ ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೇಂದ್ರ-ರಾಜ್ಯ ಸರ್ಕಾರಗಳಿಂದ ರೈತರಿಗೆ ಸಿಗುತ್ತಿರುವ ಸವಲತ್ತು ಮುಟ್ಟುಗೋಲು ಹಾಕುತ್ತಿರುವ ಬ್ಯಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಕೆಲಹೊತ್ತು ಧರಣಿ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರೈತ ದೇಶದ ಬೆನ್ನೆಲುಬು, ಮಣ್ಣಿನ ಮಗ, ಭೂಮಿಯಲ್ಲಿ ಹಗಲು ರಾತ್ರಿ ದುಡಿದು ಎಲ್ಲರಿಗೂ ಅನ್ನ ಕೊಡುತ್ತಾನೆ. ಆದರೀಗ ಅವನ ಸ್ಥಿತಿಯೇ ಶೋಚನೀಯವಾಗಿದೆ. ಸಾಲ ವಸೂಲಾತಿ, ಬಡ್ಡಿಗಾಗಿ ವಿವಿಧ ಬ್ಯಾಂಕ್ ಅಧಿಕಾರಿಗಳು ರೈತರ ಜಮೀನನ್ನು ಹರಾಜು ಮಾಡಿ, ಅವರ ಜೀವನದ ಜೊತೆ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಬೆಲೆ-ಬಾಳುವ ರೈತರ ಜಮೀನುಗಳನ್ನ ಅವರಿಗೆ ಗೊತ್ತೇ ಇಲ್ಲದೆ ಇ-ಟೆಂಡರ್ ಮೂಲಕ ಕಡಿಮೆ ಬೆಲೆಗೆ ಹಾರಾಜು ಮಾಡುತ್ತಿದ್ದಾರೆ.
ಇ-ಟೆಂಡರ್ ಹರಾಜು ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು. ಹಾಗೆಯೇ ವೃದ್ದಾಪ್ಯ ವೇತನ ಮತ್ತು ಹಾಲಿನ ಮತ್ತು ನರೇಗಾ ಹಣ ಹಾಗೂ ವಿಧವಾ ವೇತನ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಹಾಗೆಯೇ ಹರಾಜು ಹಾಕಿರುವ ಜಮೀನನ್ನು ಹಿಂದಿರುಗಿಸಿ ಕೊಡಿಸಬೇಕೆಂದು ಆಗ್ರಹಿಸಿದರು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಜಿ. ಹಳ್ಳಿ ಬಿ.ನಾರಾಯಣಸ್ವಾಮಿ, ರಾಜ್ಯ ರೈತ ಸಂಘದ ಮುಖಂಡ ಸ್ವಾಮಿಗೌಡ, ರಾಜ್ಯ ಉಪಾಧ್ಯಕ್ಷ ಕಣಗಾಲ್ ಮೂರ್ತಿ, ತಾಲೂಕು ಅಧ್ಯಕ್ಷ ಬಿ.ಎಂ. ಮಂಜುನಾಥ್, ಶಿವಣ್ಣ ಪಾರ್ವತಮ್ಮ, ಯೂಸೂಬ್ ಗೊರೂರು, ಹನುಮಂತಯ್ಯ, ರುದ್ರೇಗೌಡ, ಲಕ್ಷ್ಮಣ್ ಇತರರು ಉಪಸ್ಥಿತರಿದ್ದರು.