ಸರ್ಕಾರದ ವಿರುದ್ಧ ಕಾಂಗ್ರೆಸ್ ಜನಧ್ವನಿ

20CBP1
Published on

ಚಿಕ್ಕಬಳ್ಳಾಪುರ: ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಹಾಗೂ ಕರೊನಾ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಗುರುವಾರ ಜನಧ್ವನಿ ಪ್ರತಿಭಟನೆ ನಡೆಸಿತು. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟು ಶಿಡ್ಲಘಟ್ಟ ವೃತ್ತದಲ್ಲಿ ರಸ್ತೆ ಸಂಚಾರ ತಡೆ ನಡೆಸಿತು, ಬಳಿಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ನಾಗಪ್ರಶಾಂತ್ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿತು.

ರಾಜ್ಯದಲ್ಲಿ ಕರೊನಾ ಹೆಸರಿನಲ್ಲಿ ಕೋಟ್ಯಂತರ ರೂ.ಲೂಟಿಯಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಮತ್ತು ಚಿಕಿತ್ಸೆ ಇಲ್ಲದೇ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಬಿಜೆಪಿಯದ್ದು ಜನರ ಶವಗಳ ಮೇಲೂ ಸ್ವಾರ್ಥ ಆಡಳಿತ ನಡೆಸುವ ಸರ್ಕಾರ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಕಿಡಿಕಾರಿದರು.

ಕರೊನಾ ಅವ್ಯವಹಾರದ ಶ್ವೇತಪತ್ರ ಹೊರಡಿಸುವಂತೆ ಮತ್ತು ಸಮಗ್ರ ತನಿಖೆಗೆ ಒತ್ತಾಯಿಸಿದರೂ ಕಿವಿಗೊಡದೆ ನುಣುಚಿಕೊಳ್ಳುತ್ತಿದೆ. ಜನರ ಪ್ರಾಣ ಹೋಗುತ್ತಿದ್ದರೂ ಮಾನವೀಯತೆಯಿಂದ ವರ್ತಿಸುತ್ತಿಲ್ಲ. ಇದರ ನಡುವೆ ಮಾರಕ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಮಾನ ನಿಲ್ದಾಣಗಳು ಮತ್ತು ರೈಲುಗಳು ಹಂತ ಹಂತವಾಗಿ ಖಾಸಗಿ ಕಂಪನಿಗಳ ಪಾಲಾಗುತ್ತಿವೆ. ಪ್ರಧಾನಿಯ ಆಡಳಿತ ನೀತಿಗಳು ಅದಾನಿ, ಅಂಬಾನಿ ಸೇರಿ ಉದ್ದಿಮೆದಾರರಿಗೆ ವರದಾಯಕವಾಗಿವೆ ಎಂದು ಕಾಂಗ್ರೆಸ್ ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ ಆರೋಪಿಸಿದರು.

ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ, ಕರ್ನಾಟಕದಲ್ಲೂ ವಾಮಾ ಮಾರ್ಗದಲ್ಲಿಯೇ ಆಡಳಿತ ಚುಕ್ಕಾಣಿ ಹಿಡಿದೆ. ಅಧಿಕಾರ ಉಳಿಸಿಕೊಳ್ಳುವ ದುರುದ್ದೇಶದಿಂದ ಸಚಿವರು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಕೆ.ವಿ.ಮತ್ತು ಶಿಕ್ಷಣ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಆರೋಪಿಸಿದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಬಿ.ಎಸ್.ರಫೀವುಲ್ಲಾ, ಜಿಪಂ ಸದಸ್ಯ ಪ್ರಕಾಶ್, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಜಯರಾಂ, ಪ್ರಧಾನ ಕಾರ್ಯದರ್ಶಿ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net