ಸರ್ಕಾರದ ವಿರುದ್ಧ ಆಯನೂರು ಗುಡುಗು

ayanur manjunath
Published on

ಶಿವಮೊಗ್ಗ: ಕರೊನಾ ಸಂಕಷ್ಟಕ್ಕೆ ಸಿಲುಕಿರುವ ಅತಿಥಿ ಉಪನ್ಯಾಸಕರ ಬಾಕಿ ಗೌರವ ಧನ ತಕ್ಷಣ ಬಿಡುಗಡೆ ಮಾಡದಿದ್ದರೆ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ವಿರುದ್ಧವೇ ಧ್ವನಿ ಎತ್ತುವ ಅಥವಾ ಹೋರಾಟ ಮಾಡುವ ಪರಿಸ್ಥಿತಿ ನಿರ್ವಣವಾಗಲಿದೆ ಎಂದು ಎಂಎಲ್​ಸಿ ಆಯನೂರು ಮಂಜುನಾಥ ಎಚ್ಚರಿಕೆ ನೀಡಿದರು.

ಲಾಕ್​ಡೌನ್ ಬಳಿಕ ಅತಿಥಿ ಉಪನ್ಯಾಸಕರ ಬದುಕು ಮೂರಾಬಟ್ಟೆಯಾಗಿದೆ. ಗೌರವಯುತ ಹುದ್ದೆಯಲ್ಲಿದ್ದವರು ಆರ್ಥಿಕ ತೊಂದರೆಗೆ ಸಿಲುಕಿ ಬೀದಿಯಲ್ಲಿ ತರಕಾರಿ, ಹಣ್ಣು ಮಾರಾಟ ಹಾಗು ಕೂಲಿ ಕೆಲಸ ಮಾಡುವ ಸ್ಥಿತಿಗೆ ತಲುಪಿದ್ದಾರೆ. ಇದು ಸರ್ಕಾರಕ್ಕೆ ನಾಚಿಗೇಡಿನ ಸಂಗತಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಮನುಷ್ಯತ್ವವನ್ನೇ ಮರೆತಿರುವ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪನ್ಯಾಸಕರ ಗೌರವಧನ ಬಿಡುಗಡೆಗೆ ತಾಂತ್ರಿಕ ಕಾರಣ ನೀಡುತ್ತಿದ್ದಾರೆ. ಸೃಜನಶೀಲತೆ ಕಳೆದುಕೊಂಡಿದ್ದು ಹೃದಯಹೀನ ಸರ್ಕಾರ ಇದು. ಆಡಳಿತ ಪಕ್ಷ ಎಂಬ ಕಾರಣಕ್ಕೆ ಮೌನವಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದೇನೆ. ಆದರೆ ಮೌನ ನನ್ನ ದೌರ್ಬಲ್ಯವಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಅಧಿವೇಶನ ನಡೆಯುವಾಗ ಸಾವಿರಾರು ಅತಿಥಿ ಉಪನ್ಯಾಸಕರೊಂದಿಗೆ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net