ಸರ್ಕಾರದ ರೈತ ವಿರೋಧಿ ನೀತಿಗೆ ಖಂಡನೆ

21CBP3 (1)
Published on

ಚಿಕ್ಕಬಳ್ಳಾಪುರ : ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ( ಪ್ರೊ ನಂಜುಂಡಯ್ಯ ಸ್ಥಾಪಿತ) ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟಿಸಿತು.

ನಗರದ ಶಿಡ್ಲಘಟ್ಟ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೂ ಕಾಲ್ನಡಿಗೆಯಲ್ಲಿ ಘೋಷಣೆ ಕೂಗುತ್ತ ಬಂದ ರೈತರು ಜಿಲ್ಲಾಧಿಕಾರಿ ಆರ್.ಲತಾ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಸ್ಪಷ್ಟ ಬಹುಮತದೊಂದಿಗೆ ಆಡಳಿತ ನಡೆಸುತ್ತಿರುವ ಸರ್ಕಾರವು ರೈತ ವಿರೋಧಿ ನೀತಿ ಜಾರಿಯ ಮೂಲಕ ಸ್ವಯಂ ಪತನಕ್ಕೆ ನಾಂದಿ ಹಾಡುತ್ತಿವೆ. ಭವಿಷ್ಯದಲ್ಲಿ ಮಾರಕ ಕ್ರಮಗಳಿಗೆ ದೊಡ್ಡ ಹೊಡೆತ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ರೈತರು, ಕಾರ್ಮಿಕರು, ಬಡ ಮತ್ತು ಮಧ್ಯಮ ವರ್ಗದ ಜನರ ಹಿತ ಕಾಪಾಡುವ ಆಡಳಿತದ ಹೆಸರಿನಲ್ಲಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ, ಉದ್ದಿಮೆದಾರರ ಹಲವು ವಿನಾಯಿತಿ ಮತ್ತು ಸವಲತ್ತುಗಳ ಮೂಲಕ ಬಂಡವಾಳಶಾಹಿಗಳ ಸರ್ಕಾರ ಎಂಬುದಾಗಿ ನಿರೂಪಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತ ಮುಖಂಡರಾದ ರಾಜಣ್ಣ, ಮುನಿರಾಜು, ರಾಮಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net