

ಗೌರಿಬಿದನೂರು : ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆ ಕುರಿತು ಮನೆ ಮನೆಗೆ ತಲುಪಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎನ್.ಎಂ.ರವಿನಾರಾಯಣ ರೆಡ್ಡಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಕುರಿತು ಮನೆ ಮನೆಗೆ ಕರಪತ್ರ ವಿತರಣೆ ಗುರುವಾರ ನಗರದ ಪಾಂಡುರಂಗಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿ ಮಾತನಾಡಿದರು.
ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದ್ದ ದೇಶದ ಆರ್ಥಿಕತೆಗೆ ಕರೊನಾ ಮಹಾಮಾರಿಯ ಅಡ್ಡಿಯಾದರೂ ಅದನ್ನು ಮೀರಿ ಸರ್ಕಾರ ಸಾಗಿಬಂದಿರುವ ಸಾಧನೆ ಪ್ರಶಂಸನೀಯ ಎಂದರು.ಜನರ ಆಕಾಂಕ್ಷೆಗಳಿಗೆ ತಕ್ಕಂತೆ ಪ್ರಧಾನಿ ಮೋದಿರವರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಜನ್‌ಧನ್ ಖಾತೆ ಯೋಜನೆ ಆರಂಭಿಸುವಾಗ ಎಲ್ಲರೂ ಟೀಕಿಸಿದ್ದರು. ಈಗ ಅದರ ಪ್ರಯೋಜನ ಎಲ್ಲರಿಗೂ ತಿಳಿಯುತ್ತಿದೆ ಎಂದು ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ ತಿರುಗೇಟು ನೀಡಿದರು.
ತಾಲೂಕು ಅಧ್ಯಕ್ಷ ರಮೇಶ್‌ರಾವ್ ಶೇಳಕೆ, ನಗರಸಭೆ ಸದಸ್ಯ ಮಾರ್ಕೇಟ್ ಮೋಹನ್, ಕೋಚಿಮಲ್ ಮಾಜಿ ಅಧ್ಯಕ್ಷ ಎಸ್.ರಮೇಶ್, ಮುಖಂಡರಾದ ಡಿ.ಜೆ.ಚಂದ್ರಮೋಹನ್, ಜಯಣ್ಣ, ಹರೀಶ್ ಇತರರಿದ್ದರು.