ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಸಚಿವ ಕೆ.ಎನ್. ರಾಜಣ್ಣ

ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಸಚಿವ ಕೆ.ಎನ್. ರಾಜಣ್ಣ
Published on

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಜನರ ಪರವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನ ದುರ್ಬಳಕೆ ಮಾಡಿಕೊಳ್ಳದೆ. ಎಲ್ಲರೂ ಸದ್ಬಳಕೆ ಮಾಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.

ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಗೃಹ ಜ್ಯೋತಿ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಹಲವು ಭರವಸೆಗಳನ್ನ ನೀಡಿದ್ದೆವು ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಎಲ್ಲಾ ಭರವಸೆಗಳನ್ನ ನುಡಿದಂತೆ ಈಡೇರಿಸಿದ್ದೇವೆ ಎಂದು ಹೇಳಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷಗಳು ಈ ಯೋಜನೆಗಳನ್ನ ಜಾರಿಗೆ ತರಲು ಸಾಧ್ಯವಿಲ್ಲ ಎಂಬ ಮಾತುಗಳ ನಾಡುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರು ಗ್ರಾಮೀಣ ಭಾಗದಿಂದ ಬಂದು 14 ಬಾರಿ ಬಜೆಟ್ ಮಂಡಿಸುವ ಮೂಲಕ ಯಾವ ಆರ್ಥಿಕ ತಜ್ಞರಿಗೂ ಕಡಿಮೆ ಇಲ್ಲದಂತೆ ಆದಾಯಗಳನ್ನ ಕ್ರೂಡಿಕರಿಸಿ ಎಲ್ಲಾ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದರು.

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೂಡ ಹಲವು ಭಾಗ್ಯಗಳನ್ನು ಜಾರಿಗೆ ತಂದರು. ಅದರಲ್ಲಿ ನನಗೆ ಅತ್ಯಂತ ಪ್ರಿಯವಾಗಿದ್ದು ಅನ್ನ ಭಾಗ್ಯ, ಬಡವರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಆ ಯೋಜನೆಯನ್ನು ಜಾರಿಗೆ ತಂದರು. ಅದೇ ರೀತಿ ಈ ಬಾರಿ ಅಧಿಕಾರಕ್ಕೆ ಬಂದ ಮೇಲೆ ಗೃಹಲಕ್ಷ್ಮಿ, ಗೃಹಜೋತಿ, ಶಕ್ತಿ, ಅನ್ನಭಾಗ್ಯ ಸೇರಿದಂತೆ ಇತರೆ ಯೋಜನೆಗಳಿಗೆ ಕೋಟ್ಯಂತರರು ಅನುದಾನವನ್ನ ಸಂಗ್ರಹಿಸಿ ಜನರಿಗೆ ನೀಡುತ್ತಿದ್ದಾರೆ ಎಂದರು.

ವಿರೋಧಪಕ್ಷದವರು ನಮ್ಮ ಎಲ್ಲಾ ಯೋಜನೆಗಳನ್ನು ಕೂಡ ಟೀಕೆ ಮಾಡುತ್ತಾರೆ , 200 ಯೂನಿಟ್ ವಿದ್ಯುತ್ ಕೊಡಬೇಕು ಎಂದು ಹೇಳುತ್ತಿದ್ದಾರೆ ಒಂದು ಕುಟುಂಬ ಸರಾಸರಿ ಎಷ್ಟು ವಿದ್ಯುತ್ ಖರ್ಚು ಮಾಡುತ್ತದೆ ಅದಕ್ಕೆ ಅನುಗುಣವಾಗಿ ಅವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಯಾರೂ ಕೂಡ ದುರ್ಬಲಕ್ಕೆ ಮಾಡಿಕೊಳ್ಳದೆ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಯೋಜನೆಯನ್ನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು

ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದಿವೆ ಗ್ರಾಮೀಣ ಭಾಗದಲ್ಲಿ ಇನ್ನೂ ಕೂಡ ಅವರಿಗೆ ಮೂಲಭೂತ ಸೌಕರ್ಯಗಳು ಒದಗಿಸಲು ನಾವು ವಿಫಲರಾಗಿದ್ದೇವೆ. ನಮ್ಮ ಸರ್ಕಾರ ಜನರ ಮೂಲಭೂತ ಸೌಕರ್ಯಗಳು ಮತ್ತು ಅವರ ಅಗತ್ಯತೆಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಅನುದಾನದ ಕೊರತೆ ಇಲ್ಲದೆ ಎಲ್ಲಾ ಎಲ್ಲಾ ಕೆಲಸ ಕಾರ್ಯಗಳು ಕೂಡ ಕೈಗೆತ್ತಿಕೊಳ್ಳಲಿದ್ದಾರೆ ಎಂದರು.

ಅರಸೀಕೆರೆ ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡ ಮಾತನಾಡಿ, ಇಡೀ ರಾಜ್ಯದಲ್ಲಿ ಶೋಷಿತರು, ದಲಿತರು ಎಲ್ಲಾ ವರ್ಗದವರನ್ನು ಸಮಾನಾಗಿ ಕಾಣುವ ನಿಟ್ಟಿನಲ್ಲಿ ಅವರನ್ನು ಆರ್ಥಿಕವಾಗಿ ಮೇಲೆತ್ತುವಂತಹ ಯೋಜನೆಯ ತಂದಿರುವಂತಹ ಏಕೈಕ ನಾಯಕ ಎಂದರೆ ಸಿದ್ದರಾಮಯ್ಯ ಎಂದು ಹಾಡಿ ಹೋಗಳಿದರು.

ಬಡವರು,ಶೋಷಿತರ ಪರವಾದ ಸರ್ಕಾರ ಯಾವುದಾದರೂ ಇದೆ ಎಂದರೆ ಅದು ಸಿದ್ದರಾಮಯ್ಯ ಅವರ ಸರ್ಕಾರ, ಬಡವರಿಗೆ ಅಕ್ಕಿ ನೀಡಲು ಕೇಂದ್ರಕ್ಕೆ ಮನವಿ ಮಾಡಿದರೆ ಅವರು ನೀಡಲಿಲ್ಲ ಅದೇ ಅದಾನಿ, ಅಂಬಾನಿ, ಟಾಟಾ ಬಿರ್ಲಾ ಅಂತಹ ಶ್ರೀಮಂತರ ಕೋಟ್ಯಂತರ ತೆರಿಗೆ ಹಣವನ್ನ ಮನ್ನಾ ಮಾಡಿದರು . ಬಡವರ ಪರ ಇರುವ ಸರ್ಕಾರವು ಯಾವುದು ಶ್ರೀಮಂತರ ಪರ ಇರುವ ಸರ್ಕಾರ ಯಾವುದು ಎಂಬುದು ಅರ್ಥ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.

ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಹಾಸನಂಬ ಜಾತ್ರಾ ಮಹೋತ್ಸವ ಇನ್ನೇನು ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ. ಆದ್ದರಿಂದ ಮೈಸೂರು ದಸರಾ ಮಾದರಿಯಲ್ಲಿ ಆದ್ದೂರಿಯಾಗಿ ಆಚರಿಸಲು ಸಚಿವರು ಹೆಚ್ಚಿನ ಅನುದಾನವನ್ನ ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದರು

ಕಾರ್ಯಕ್ರಮದಲ್ಲಿ ಸಚಿವ ರಾಜಣ್ಣ ಅವರ ಪತ್ನಿ ಶಾಂತಲಾ ರಾಜಣ್ಣ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಸೆಸ್ಕಂನ ಮುಖ್ಯ ಇಂಜಿನಿಯರ್ ಕೆಎಂ ಮಹದೇವಸ್ವಾಮಿ ಪ್ರಸನ್ನ ಅಧೀಕ್ಷಕ ಎಂಜಿನಿಯರ್ ಅನ್ನಪೂರ್ಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈ ಎಚ್ ಲಕ್ಷ್ಮಣ್ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net