

ಮೈಸೂರು: ಸರ್ಕಾರ ಅಂಗವಿಕಲರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಪಾರದರ್ಶಕವಾಗಿ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂಗವಿಕಲರ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗವಿಕಲರಿಗೆ ಸ್ಪಂದಿಸುವ ಮೂಲಕ ಅವರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕು ಎಂದು ತಿಳಿಸಿದ ಡಿಸಿ, ವಸತಿ ಸೌಲಭ್ಯ ಕಲ್ಪಿಸಲು ಅಗತ್ಯ ಜಮೀನು ಗುರುತಿಸುವಂತೆ ಮೈಸೂರು ತಹಸೀಲ್ದಾರ್ ಅವರಿಗೆ ನಿರ್ದೇಶಿಸಿದರು.
ಬಸ್‌ಗಳಲ್ಲಿ ಅಂಗವಿಕಲರಿಗೆ ಮೀಸಲು ಇರುವ ಆಸನಗಳನ್ನು ಬಿಟ್ಟು ಕೊಡಬೇಕು. ಅದು ಅವರಿಗೆ ಇರುವ ಹಕ್ಕು. ಈ ಬಗ್ಗೆ ಕ್ರಮವಹಿಸುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಮಾಸಾಶನ ಬರದೆ ಇರುವವರ ಪಟ್ಟಿ ಮಾಡಿ, ನಿಯಮಾನುಸಾರ ಕ್ರಮವಹಿಸಿ ಅರ್ಹರಿಗೆ ಪೆನ್ಸನ್ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಹಿಂದೆ ಇದ್ದ ಜಿಲ್ಲಾಧಿಕಾರಿಗಳು ಅಂಗವಿಕಲರಿಗೆ ವಸತಿಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದರು. ಆ ಪ್ರಕಾರ ವಸತಿರಹಿತ ಅಂಗವಿಕಲರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು. ಉಚಿತ ಬಸ್ ಪಾಸ್ ನೀಡಬೇಕು.
ಬಸ್‌ಗಳಲ್ಲಿ ಅಂಗವಿಕಲರಿಗೆ ಮೀಸಲು ಇರುವ ಆಸನಗಳನ್ನು ಬಿಟ್ಟುಕೊಡಬೇಕು. ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಂಗವಿಕಲರಿಗೆ ಮೀಸಲು ಇರುವ ಶೇ.5ರಷ್ಟು ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆ ಆಗುತ್ತಿಲ್ಲ. ಇದು ಪರಿಣಾಮಕಾರಿಯಾಗಿ ಬಳಕೆಯಾಗಬೇಕು. ತ್ರಿಚಕ್ರ ವಾಹನಗಳನ್ನು ಅರ್ಹ ಅಂಗವಿಕಲತೆ ಇರುವ ವ್ಯಕ್ತಿಗಳಿಗೆ ನೀಡಬೇಕು ಎಂದು ಅಂಗವಿಕಲರು ಆಗ್ರಹಿಸಿದರು.
ಕೆಲವರಿಗೆ ಮಾಸಾಶನ ಒಂದು ವರ್ಷದಿಂದ ಬರುತ್ತಿಲ್ಲ ಎಂದು ಸಮಸ್ಯೆಯನ್ನು ಬಿಚ್ಚಿಟ್ಟರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಸಿಇಒ ಎಸ್.ಯುಕೇಶ್‌ಕುಮಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಶಂಕರಗೌಡ ಪಾಟೀಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.