

ಬೀದರ್: ಹಿರಿಯರ ತ್ಯಾಗ, ಬಲಿದಾನ ಹಾಗೂ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ದೇಶಾದ್ಯಂತ ಹೆಮ್ಮರವಾಗಿ ಬೆಳೆದಿದ್ದು ಇಂದು ರಾಜ್ಯ, ಕೇಂದ್ರದಲ್ಲಿ ಆಡಳಿತದಲ್ಲಿದೆ. ಕಾರ್ಯಕರ್ತರು ಸರ್ಕಾರದ ಯೋಜನೆಗಳೆಲ್ಲವೂ ಜನರಿಗೆ ಮುಟ್ಟಿಸಲು ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ ಹೇಳಿದರು.
ಬಿಜೆಪಿ ನಗರ ಘಟಕದಿಂದ ನಗರದ ನಾವದಗೇರಿ ಹತ್ತಿರದ ಶುಕ್ಲತೀರ್ಥ ಶಿವಮಂದಿರದಲ್ಲಿ ಎರಡು ದಿವಸದ ಮಂಡಲ ಪ್ರಮುಖರ ಪ್ರಶಿಕ್ಷಣ ವರ್ಗಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷ ಆಡಳಿತದಲ್ಲಿರುವ ಕಾರಣ ಮುಖಂಡರ, ಕಾರ್ಯಕರ್ತರ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ. ಜನರ ಆಶೋತ್ತರಗಳಿಗೆ ಈಡೇರಿಸುವ ಕೆಲಸ ನೆಮ್ಮಲ್ಲರ ಹೊಣೆಯಾಗಬೇಕು ಎಂದು ತಿಳಿಸಿದರು.
ಜನ ಸಂಘದ ಮೂಲಕ ದೇಶದಲ್ಲಿ ಪಕ್ಷ ಬೆಳೆದು ಬಂದಿದೆ. ಪಕ್ಷ ಹೇಗೆ ಬೆಳೆದು ಬಂದಿದೆ ಎನ್ನುವ ಕುರಿತು ಕಾರ್ಯಕರ್ತರು ಅರಿತು ಪಕ್ಷದ ತತ್ವ, ಸಿದ್ಧಾಂತಗಳ ಮೇಲೆ ನಡೆಯಬೇಕು. ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಮತ್ತು ಕೊಡುಗೆಗಳು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಮಾತನಾಡಿ, ಪಕ್ಷದಲ್ಲಿ ಶಿಸ್ತು ಮತ್ತು ಸಮಯ ಪಾಲನೆಗೆ ಆದ್ಯತೆ ಕೊಡಬೇಕು. ಎಲ್ಲ ಪದಾಧಿಕಾರಿಗಳು ತಮಗೆ ಕೊಟ್ಟ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.
ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ತೂಗಾಂವಕರ್, ಪ್ರಮುಖರಾದ ಬಾಬು ವಾಲಿ, ಗುರುನಾಥ ಜಾಂತಿಕರ್, ಈಶ್ವರಸಿಂಗ್ ಠಾಕೂರ್, ಉಪೇಂದ್ರ ದೇಶಪಾಂಡೆ ಇತರರಿದ್ದರು. ಪ್ರಶಿಕ್ಷಣ ಪ್ರಕೋಷ್ಠ ಜಿಲ್ಲಾ ಸಂಚಾಲಕ ಶಿವರಾಜ ಗಂದಗೆ ಪ್ರಾಸ್ತಾವಿಕ ಮಾತನಾಡಿದರು. ನಗರ ಅಧ್ಯಕ್ಷ ಹಣಮಂತ ಬುಳ್ಳಾ ಸ್ವಾಗತಿಸಿದರು. ಸುನೀಲ ಗೌಳಿ ನಿರೂಪಣೆ ಮಾಡಿದರು. ಅನೀಲ ರಾಜಗೀರಾ ವಂದಿಸಿದರು. ನಂತರ ವಿವಿಧ ವಿಷಯಗಳು ಕುರಿತು ದಿನವಿಡಿ ಗೋಷ್ಠಿಗಳು ನಡೆದವು.