

ಹುಲಸೂರು: ಭಾರತಿಯ ಜನತಾ ಪಕ್ಷದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನೀಲ ಭೂಸಾರೆ ಹೇಳಿದರು.
ದೇವನಾಳ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಓಬಿಸಿ ಮೋರ್ಚಾ ದಿಂದ ಸೇವಾ ಸಪ್ತಾಹ ನಿಮಿತ್ತ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರ ಜನ್ಮದಿನದ ನಿಮಿತ್ತ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 2ರವರೆಗೆ ಅಭಿಯಾನ ನಡೆಯಲಿದೆ ಎಂದರು.
ಪಕ್ಷದ ಎಲ್ಲ ಕಾರ್ಯಕರ್ತರು, ಪ್ರಮುಖರು ಕೂಡಿಕೊಂಡು ಗ್ರಾಮೀಣ ಭಾಗದಲ್ಲಿನ ವಿವಿಧ ದೇವಸ್ಥಾನ, ಸ್ಮಶಾನ ಭೂಮಿ ಸೇರಿ ವಿವಿಧೆಡೆ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಜಿಪಂ ಪ್ರತಿಪಕ್ಷದ ನಾಯಕ ಸುಧೀರ ಕಾಡಾದಿ ಮಾತನಾಡಿ, ಕೇಂದ್ರ ಸರ್ಕಾರ ಜನರ ಹಿತಕಾಗಿ ಅನೇಕ ಯೋಜನೆ ಜಾರಿಗೆ ತರುತ್ತಿದ್ದು, ಅವುಗಳ ಲಾಭ ಪಡೆಯಬೇಕು ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ದೀಪಕ ಗಾಯಕವಾಡ ಮಾತನಾಡಿ, ಪ್ರಧಾನಿ ಮೋದಿಯವರು ಜನಪರ ಕಾರ್ಯಗಳು ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ ವಕಾರೆ, ಬಿಜೆಪಿ ನಗರ ಘಟಕ ಅಧ್ಯಕ್ಷ ಕೃಷ್ಣಾ ಗೋಣೆ, ದೀಪಕ ಗಾಯಕವಾಡ, ಮಾತನಾಡಿದರು. ಪ್ರಮುಖರಾದ ಶಂಕರ ನಾಗದೆ, ಅರವಿಂದ ಮುತ್ತೆ, ಹಣಮಂತ ದರ್ಜೆ, ಚಂದ್ರಕಾಂತ ದೇಟ್ನೆ, ಬಸವರಾಜ ಡೋಣಗಾಂವಕರ್, ವಿಜಯ ಪಾಟೀಲ್, ಸೋಮನಾಥ ನಂದಗೆ ಇತರರಿದ್ದರು.