ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಲಾಭ

JUL 14-HRP-01
Published on

ಹರಪನಹಳ್ಳಿ: ಸರ್ಕಾರಿ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಿ ಪ್ರಯಾಣಿಕರು ಸಹಕರಿಸಬೇಕೆಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಶಕ್ತಿ ಯೋಜನೆ ಎರಡು ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಐದು ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಲಾಭವಾಗಿದೆ. ಎರಡು ವರ್ಷದ ಅವಧಿಯಲ್ಲಿ ಹರಪನಹಳ್ಳಿಯಿಂದ 1.40 ಕೋಟಿ ಸಲ ಮಹಿಳೆಯರು ಪ್ರಯಾಣ ಮಾಡಿದ್ದು, ಇದರಿಂದ ಸರ್ಕಾರಕ್ಕೆ 40 ಕೋಟಿ ರೂಪಾಯಿಗೂ ಅಧಿಕ ಲಾಭವಾಗಿದೆ ಎಂದರು.

ಶಕ್ತಿ ಯೋಜನೆಯಿಂದ ತಾಲೂಕಿನ ಮಹಿಳೆಯರು ಸಾಕಷ್ಟು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ, ರಾಜ್ಯದಲ್ಲಿ ಒಟ್ಟಾರೆ 500 ಕೋಟಿ ಬಾರಿ ಮಹಿಳೆಯರು ಪ್ರಯಾಣಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗುತ್ತದೆ ಎಂದು ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದರು. ನಮ್ಮ ಸರ್ಕಾರ ಅದಕ್ಕೆ ತಕ್ಕ ಉತ್ತರ ನೀಡಿದೆ ಎಂದು ತಿಳಿಸಿದರು.

ಮುಂದಿನ ವಾರದಲ್ಲಿ ಹೆಚ್ಚುವರಿಯಾಗಿ ಎರಡು ಬಸ್‌ಗಳು ಬರಲಿವೆ. ಶಕ್ತಿ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳಬೇಡಿ. ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ 10 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡುವಂತೆ ಸದ್ಯದಲ್ಲೇ ಮನವಿ ಮಾಡುವೆ ಎಂದು ಶಾಸಕಿ ತಿಳಿಸಿದರು.

ಪ್ರಮುಖರಾದ ರೆಹಮಾನ್ ಸಾಬ್, ವೆಂಕಟೇಶ್ ವಕೀಲ, ಜಂಬಣ್ಣ ಮುತ್ತಿಗಿ, ದಾದಾಪೀರ್, ನಂದಿಬೇವೂರು ಅಶೋಕ್, ಬಾವಿಹಳ್ಳಿ ಚಂದ್ರಪ್ಪ, ಮತ್ತಿಹಳ್ಳಿ ರಾಮಪ್ಪ, ಕವಿತಾ, ವಿಜಯಲಕ್ಷ್ಮೀ, ಮೈದೂರು ರಾಮಣ್ಣ, ಹುಲಿಕಟ್ಟಿ ಚಂದ್ರಪ್ಪ, ಉದಯ್ ಶಂಕರ್, ಮೋರಿಗೆರೆ ಹೇಮಣ್ಣ, ದೇವೇಂದ್ರಗೌಡ, ಗುಡಿಹಳ್ಳಿ ಹಾಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net