

ಸುರಪುರ : ಪ್ರಕೃತಿ ವಿಕೋಪದಿಂದಾಗಿ ಸರ್ಕಾರ ನೀಡುವ ಪರಿಹಾರ ಹಣವನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ನಗರ ಶಾಸಕರ ಕಚೇರಿಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಿಸಿದ ಅವರು, ಮಳೆ, ಗಾಳಿ, ಸಿಡಿಲಿಗೆ ಅಪಾರ ಹಾನಿಯಾಗುತ್ತಿದೆ. ಯಾವ ಕಾರಣಕ್ಕೂ ಮಳೆಗಾಲದಲ್ಲಿ ಮರದ ಕೆಳಗಡೆ ಜಾನುವಾರುಗಳನ್ನು ಕಟ್ಟಬೇಡಿ ಎಂದರು.
ಕೊಟ್ಟಿಗೆ ಮತ್ತು ಮನೆ ಬೀಳುವ ಹಂತದಲ್ಲಿದ್ದರೆ ತಮ್ಮ ಶಕ್ತಿ ಅನುಸಾರ ದುರಸ್ತಿ ಮಾಡಿಕೊಂಡು ಜೀವ ಉಳಿಸಿಕೊಳ್ಳಬೇಕು. ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ. ಪ್ರಾಣಿಗಳ ಜೀವ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಗ್ರಾಮ ಪಂಚಾಯಿತಿಗಳಲ್ಲಿ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅನುದಾನ ನೀಡುತ್ತಿದ್ದು, ಅರ್ಹರು ಲಾಭ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಕಾಂಗ್ರೆಸ್ ಮುಖಂಡ ವಿಠ್ಠಲ್ ಯಾದವ್ ಇದ್ದರು. ಸಿಡಿಲಿಗೆ ಬಲಿಯಾದ ಜಾನುವಾರು ಮಾಲೀಕರಿಗೆ ಸಹಾಯಧನ ಚೆಕ್ ವಿತರಿಸಲಾಯಿತು.