ಸರ್ಕಾರದ ನೆರವಿಗೆ ಕುಂಬಾರರ ಮೊರೆ : ಕೆರೆಗಳು ತುಂಬಿ ಮಣ್ಣಿಗೆ ಕೊರತೆ

20-vij-2a-kumbarara bavne
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಕುಂಬಾರಿಕೆ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತಾ, ಹಲವು ವರ್ಷದಿಂದ ಇದರಲ್ಲೇ ಜೀವನ ಕಂಡುಕೊಂಡಿರುವ ಕುಂಬಾರರು ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಕೆರೆ-ಕುಂಟೆಗಳು ತುಂಬಿ ರೈತರ ಬದುಕನ್ನು ಹಸಿರಾಗಿಸಿದರೆ ಕೆರೆ ಮಣ್ಣನ್ನೇ ನಂಬಿದ್ದ ಕುಂಬಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡವರ ಕೈಗೆ ಕೆಲಸವಿಲ್ಲದಂತಾಗಿದ್ದಾರೆ.
ಕೆರೆಗಳಲ್ಲಿ ನೀರು ಇರುವುದರಿಂದ ಮಣ್ಣಿನ ಕೊರತೆ ಎದುರಾಗಿದೆ. ದುಬಾರಿ ಹಣ ನೀಡಿ ಮಣ್ಣು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನೆರವು ನೀಡಿದರೆ, ಬದುಕು ಸುಧಾರಿಸುತ್ತದೆ ಎಂಬುದು ಇವರ ಮೊರೆಯಾಗಿದೆ.

ನೆರವು ನೀಡಿ: ಮಡಕೆ ತಯಾರಿಸಲು ಹೊಸ ಹೊಸ ಯಂತ್ರೋಪಕರಣಗಳು ಬಂದಿವೆ. ಆದರೆ, ಖರೀದಿ ಮಾಡಿಕೊಳ್ಳುವ ಶಕ್ತಿಯಿಲ್ಲ. ನಾವು ಮಣ್ಣು ಮಿಶ್ರಣ ಮಾಡುವ ಯಂತ್ರವನ್ನು ಮಾತ್ರ ಖರೀದಿ ಮಾಡಿಕೊಂಡಿದ್ದೇವೆ. ಸರ್ಕಾರದಿಂದ ನಮಗೆ ನೆರವು ಸಿಕ್ಕರೆ ಆಧುನಿಕ ಯಂತ್ರಗಳನ್ನು ಖರೀದಿಸುತ್ತೇವೆ ಎಂಬುದು ಇವರ ಬೇಡಿಕೆಯಾಗಿದೆ. ಎಷ್ಟೋ ಬಾರಿ ಮಡಿಕೆಗಳನ್ನು ತಯಾರಿಸಿ, ಒಣಗಲು ಹೊರಗಡೆ ಇಟ್ಟರೆ ಮಳೆ, ಗಾಳಿಯಿಂದ ಮಡಿಕೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ, ಮಡಕೆಗಳನ್ನು ಜೋಡಿಸಲು ಶೆಡ್ ನಿರ್ಮಿಸಿಕೊಳ್ಳಬೇಕಾಗಿದೆ. ಇದಕ್ಕೂ ಆರ್ಥಿಕ ತೊಂದರೆ ಎದುರಾಗಿದೆ.

ಅಸಹಾಯಕತೆ: ನಾವು ವೆಂಕಟಗಿರಿಕೋಟೆ ಕೆರೆಯಿಂದ ಮಣ್ಣು ತರಿಸಿಕೊಂಡು ಮಡಕೆ ತಯಾರಿಸುತ್ತಿದ್ದೆವು. ಕೆರೆ ಎಚ್.ಎನ್ ವ್ಯಾಲಿ ನೀರಿನಿಂದ ಭರ್ತಿಯಾಗಿರುವ ಕಾರಣ ಮಣ್ಣು ಸಿಗುತ್ತಿಲ್ಲ. ಮೊದಲು 4 ಸಾವಿರ ರೂಪಾಯಿಗೆ ಖರೀದಿ ಮಾಡಿಕೊಳ್ಳುತ್ತಿದ್ದೆವು. ಈಗ ಬೇರೆ ಜಿಲ್ಲೆಗಳಿಂದ ತರುವ ಮಣ್ಣು, ಒಂದು ಲೋಡಿಗೆ 15 ಸಾವಿರ ರೂ.ಕೊಡಬೇಕಾಗಿದೆ. ಇದರಿಂದ ನಮಗೆ ನಷ್ಟವೇ ಆಗುತ್ತದೆ. ಮಡಕೆ ಸುಡಲು ಸೌದೆ ಖರೀದಿಸಬೇಕು. ಸೌದೆಗಳ ಬೆಲೆಯೂ ಗಗನಕ್ಕೇರಿದ್ದು, ವಿದ್ಯುತ್ ಯಂತ್ರೋಪಕರಣಗಳ ಮೂಲಕ ಸುಡಲು ಸಾಧ್ಯವಿಲ್ಲ, ಅದಕ್ಕಾಗುವಷ್ಟು ಬಂಡವಾಳ ಒದಗಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಕುಂಬಾರರು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

ಮಣ್ಣೇ ಸಿಗ್ತಿಲ್ಲ ಸ್ವಾಮಿ: ಮಣ್ಣಿನಿಂದ ಮಡಕೆ ಮಾತ್ರವಲ್ಲದೆ, ನೀರಿನ ಬಾಟಲಿ, ಗಣಪತಿ ವಿಗ್ರಹಗಳು, ದೀಪಗಳು, ಅಲಂಕಾರಿಕ ವಸ್ತುಗಳು, ಕೊಡಗಳು, ಹುಂಡಿಗಳು, ಸಂಗೀತ ಕಚೇರಿಗಳಲ್ಲಿ ಉಪಯೋಗಿಸುವ ಘಟಕಗಳು ಸೇರಿ ಕಾಲಕ್ಕೆ ತಕ್ಕಂತೆ ವಸ್ತುಗಳನ್ನು ತಯಾರು ಮಾಡಿ, ಚಿಕ್ಕಬಳ್ಳಾಪುರ, ಕೋಲಾರ, ವಿಜಯಪುರ, ದೇವನಹಳ್ಳಿ ಮುಂತಾದ ಕಡೆಗಳಲ್ಲಿ ಸಂತೆ, ಜಾತ್ರೆಗಳಲ್ಲಿ ಮಾರಾಟ ಮಾಡಿ ಹೊಟ್ಟೆ ಹೊರೆಯುತ್ತಿದ್ದವರಿಗೆ ಮಣ್ಣಿನ ಕೊರತೆ ಗಾಯದ ಮೇಲೆ ಬರೆಎಳೆದಂತಾಗಿದೆ.

ಒಂದು ಮಡಕೆಯನ್ನು 50-60 ರೂಪಾಯಿಗೆ ಮಾರುತ್ತೇವೆ, ತಯಾರಿಸಲು 35 ರಿಂದ 45 ರೂಪಾಯಿ ಖರ್ಚಾಗುತ್ತದೆ. ಪ್ರಸ್ತುತ ನಮಗೂ ಕೆಲಸವಿಲ್ಲ. ಮಾರುಕಟ್ಟೆಯಲ್ಲಿನ ಮಡಕೆ ಮಾಡುವ ವ್ಯಾಪಾರಿಗಳಿಗೂ ವ್ಯಾಪಾರವಿಲ್ಲದಂತಾಗಿದೆ. ಮುನಿರಾಜು ಕೋರಮಂಗಲ

ಇಪ್ಪತ್ತೈದು ವರ್ಷದಿಂದ ಕುಂಬಾರಿಕೆ ಕಸುಬು ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಬೇರೆ ಕಸುಬು ಗೊತ್ತಿಲ್ಲ. ಸರ್ಕಾರದ ಯೋಜನೆಗಳ ಮಾಹಿತಿಯಿಲ್ಲ. ಗುಡಿ ಕೈಗಾರಿಕೆಯಲ್ಲಿ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದ್ದಾರೆ. ಅಧಿಕಾರಿಗಳು ನಮಗೆ ನೆರವು ನೀಡಬೇಕು. ಕೊಂಡಪ್ಪ ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net