ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ

28 lxr 1.a
Published on

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಇದುವರೆಗೂ ಯಾರಲ್ಲಿಯೂ ಕರೊನಾ ವೈರಸ್ ಸೋಂಕು ಇರುವ ಬಗೆಗೆ ವರದಿಯಾಗದಿರುವುದು ಸಮಾಧಾನಕರ ಸಂಗತಿ. ಆದರೆ ಇದೀಗ ತಾಲೂಕಿನ ಬಹುತೇಕ ಹಳ್ಳಿಗಳಿಂದ ಜಿಲ್ಲೆ, ಅಂತಾರಾಜ್ಯಗಳಿಗೆ ದುಡಿಯಲು ಹೋದ ನೂರಾರು ಜನರು ವಾಪಸ್ ಬಂದಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಾಡಳಿತ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ್, ಪೊಲೀಸ್, ಆರೋಗ್ಯ ಮತ್ತು ಸ್ಥಳೀಯ ಪುರಸಭೆ ಅಧಿಕಾರಿಗಳಿಂದ ಕೈಗೊಂಡ ಮುಂಜಾಗ್ರತೆ ಕ್ರಮಗಳ ಕುರಿತು ಮಾಹಿತಿ ಪಡೆದು ಅವರು ಮಾತನಾಡಿದರು. ಸಂಬಂಧಪಟ್ಟ ಅಧಿಕಾರಿಗಳು ಎಲ್ಲಿಯೂ ಜನಸಂದಣಿಯಾಗದಂತೆ ಜೀವನಾವಶ್ಯಕ ವಸ್ತುಗಳನ್ನು ಶಿಸ್ತುಬದ್ಧವಾಗಿ ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು. ಪಟ್ಟಣವಷ್ಟೇ ಅಲ್ಲದೆ, ತಾಲೂಕಿನ ಎಲ್ಲ ಹಳ್ಳಿಗಳ ಜನರಿಗೆ ಜೀವನಾವಶ್ಯಕ ವಸ್ತುಗಳನ್ನು ಕಲ್ಪಿಸುವ ಜತೆಗೆ ಅಲ್ಲಿನ ಜನರ ಆರೋಗ್ಯ, ಮನೆಯೊಳಗೆ ಇರುವಂತೆ ತಿಳಿವಳಿಕೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಗ್ರಾಪಂ ಪಿಡಿಒಗಳಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.

ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮಾತನಾಡಿ, ಪಟ್ಟಣ ಸೇರಿ ಹಳ್ಳಿಗಳಲ್ಲಿ ದಿನಸಿ, ತರಕಾರಿ ಸೇರಿ ಜೀವನಾವಶ್ಯಕ ವಸ್ತುಗಳ ಖರೀದಿಗಾಗಿ ಜನಸಂದಣಿ ಸೇರದಂತೆ ನಿಗಾವಹಿಸಲಾಗುತ್ತಿದೆ. ಮಾರುಕಟ್ಟೆ, ಸಂತೆಗಳನ್ನು ಬಂದ್ ಮಾಡಿ ತಳ್ಳುವ ಗಾಡಿ, ಸರಕು ಸಾಗಣೆ ವಾಹನಗಳ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲಿ ನಿತ್ಯ ಬೆಳಗ್ಗೆ 6 ರಿಂದ 8 ರವರೆಗೆ ದಿನಸಿ ಮಾರುಕಟ್ಟೆ ವ್ಯಾಪಾರಕ್ಕೆ ಕಲ್ಪಿಸಿದ್ದ ಅವಕಾಶವನ್ನು ಭಾನುವಾರದಿಂದ ಸಂಪೂರ್ಣ ರದ್ದು ಪಡಿಸಲಾಗಿದೆ. ಜನರು ಯಾವುದೇ ಆತಂಕಕ್ಕೊಳಗಾಗದೆ ಸಮಾಧಾನ ಮತ್ತು ಸಹಕಾರದಿಂದ ವರ್ತಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತೆ, ಕುಡಿಯುವ ನೀರು ಸೇರಿ ಮೂಲಸೌಲಭ್ಯ ಕಲ್ಪಿಸುವಲ್ಲಿ ಸಿಬ್ಬಂದಿ, ಪೌರಕಾರ್ವಿುಕರು ಹೆಚ್ಚುವರಿ ಸೇವೆ ನೀಡುತ್ತಿದ್ದಾರೆ ಎಂದರು.

ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಪಿಎಸ್​ಐ ಶಿವಕುಮಾರ ಲೋಹಾರ, ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ನೀಲಪ್ಪ ಹತ್ತಿ ಇತರರಿದ್ದರು.

ದುಡಿಯಲು ಹೋಗಿದ್ದವರು ಈಗ ಮತ್ತೆ ಹಳ್ಳಿಗಳಿಗೆ ಬರುತ್ತಿದ್ದು, ಅವರ ಆರೋಗ್ಯ ಪರೀಕ್ಷಿಸಿ ತಿಳಿವಳಿಕೆ ನೀಡಲು ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಕರೊನಾ ಜಾಗೃತಿ ಪಡೆ ರಚಿಸಬೇಕು. ಅಲ್ಲದೆ, ಕರೊನಾ ಹರಡದಂತೆ ತಾಲೂಕಾಡಳಿತ ಮತ್ತು ಸ್ಥಳೀಯ ಪುರಸಭೆ ಕೈಗೊಳ್ಳುವ ಎಲ್ಲ ಕಾರ್ಯಕ್ಕೆ ಪೊಲೀಸ್ ಇಲಾಖೆ ಸಹಕಾರ ನೀಡಲಿದೆ. | ಆರ್.ಎಚ್. ಕಟ್ಟಿಮನಿ, ಸಿಪಿಐ

ತಾಲೂಕಿನಲ್ಲಿ ವಿದೇಶ ಪ್ರಯಾಣದಿಂದ ಬಂದ 20 ಜನರ ಕ್ವಾರಂಟೈನ್ ಅವಧಿ ಮುಗಿದಿದೆ. ಅಂತಾರಾಜ್ಯದಿಂದ ಬಂದ 725 ಜನರ ಆರೋಗ್ಯ ಪರೀಕ್ಷಿಸಿ ಅವರಿಗೂ 14 ದಿನಗಳ ಹೋಂ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಲಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್​ಗಳ ಅವಶ್ಯಕತೆಯಿದೆ.| ಗಿರೀಶ ಮರಡ್ಡಿ ವೈದ್ಯಾಧಿಕಾರಿ, ಸರ್ಕಾರಿ ಆಸ್ಪತ್ರೆ ಲಕ್ಷ್ಮೇಶ್ವರ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net