ಸರ್ಕಾರದ ನಡೆ ಪ್ರಶ್ನಿಸಿ ಕೋರ್ಟ್ನಲ್ಲಿ ಹೋರಾಟ

tejaswi surya
ಸಂಸದ ತೇಜಸ್ವಿ ಸೂರ್ಯ
Published on

ಚಿಕ್ಕಮಗಳೂರು: ಬೆಂಗಳೂರು ದಕ್ಷಿಣದ ವಿಜಯನಗರದಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ವಶ ಪಡಿಸಿಕೊಳ್ಳಲು ಮುಜರಾಯಿ ಇಲಾಖೆ ನೋಟೀಸ್ ನೀಡಿದೆ. ಸರ್ಕಾರದ ನಡೆಯನ್ನ ಕೋರ್ಟಿನಲ್ಲಿ ಪ್ರಶ್ನಿಸಿ ಹೋರಾಟ ಮಾಡುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಕ್ತರು ಕೋಟ್ಯಾಂತರ ರೂ. ಹಣ ಹಾಕುವ ದೇವಾಲಯಗಳ ಮೇಲೆ ಕಣ್ಣಿಟ್ಟು ಸರ್ಕಾರ ವಶಕ್ಕೆ ಪಡೆಯುತ್ತಿರುವುದು ಅಕ್ಷಮ್ಯ ಎಂದರು.

ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಅಲ್ಲಿನ ಭಕ್ತರಿಗೆ ಸೇರಿದ್ದಾಗಿದೆ. ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಭಕ್ತರು ದೇವಾಲಯಕ್ಕೆ ನಡೆದುಕೊಳ್ಳುತ್ತಾರೆ. ಯಾವುದೋ ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ಭಕ್ತರು ಹುಂಡಿಗೆ ಹಾಕುವ ಹಣವನ್ನು ನೋಡಿ ಹಿಂದೂ ದೇವಸ್ಥಾನಗಳನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ನೋಟೀಸ್ ನೀಡದೆ, ಏಕಾ ಏಕಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ತಪ್ಪು. ಬರುವಂತಹ ದಿನಗಳಲ್ಲಿ ವಿಜಯನಗರದÀಲ್ಲಿ ಹೋರಾಟ ರೂಪಿಸಲಾಗುವುದು. ರಾಜ್ಯ ಸರ್ಕಾರ ತನ್ನ ತೀರ್ಮಾನವನ್ನು ಬದಲಾಯಿಸುವವರೆಗೆ ಹೋರಾಟ ನಡೆಸಲಾಗುವುದು ಎಂದರು.

ಇವರಿಗೆ ಇವರ ಸರ್ಕಾರ, ಇಲಾಖೆಗಳನ್ನೇ ನಡೆಸಲು ಆಗುತ್ತಿಲ್ಲ, ಕೋಟ್ಯಾಂತರ ರೂಪಾಯಿ ಹಗರಣ ನಡೆಯುತ್ತಿದೆ. ಇದೇ ರೀತಿ ಆರೋಪವಿರುವ ಮಸೀದಿ, ಚರ್ಚ್ಗಳನ್ನ ವಶಕ್ಕೆ ತೆಗೆದುಕೊಳ್ಳುವ ಧೈರ್ಯ ಇದೆಯಾ ಎಂದು ಪ್ರಶ್ನಿಸಿದ ತೇಜಸ್ವಿ ಸೂರ್ಯ ಹಿಂದೂ ದೇವಾಲಯಗಳು ಹಿಂದುಗಳ ಆಸ್ತಿ. ನಿಮ್ಮ ಸರ್ಕಾರದ ಆಸ್ತಿಯಲ್ಲ ಎಂದು ತಿರುಗೇಟು ನೀಡಿದರು.

ನಿಮ್ಮ ಸರ್ಕಾರದಲ್ಲಿ ನಿಮಗೆ ಭ್ರಷ್ಟಾಚಾರ ನಿಲ್ಲಿಸಲು ಆಗುತ್ತಿಲ್ಲ. ಯಾವ ನಂಬಿಕೆಯಿAದ ನಿಮ್ಮ ಕೈಗೆ ನಮ್ಮ ದೇವಸ್ಥಾನ ಕೊಡುವುದು. ಸರ್ಕಾರವೇನು ಸಾಚಾನ. ಆರೋಪ, ಭ್ರಷ್ಟಾಚಾರ ಇಲ್ಲದೆ ಸರ್ಕಾರ ನಡೆಸಿಕೊಂಡು ಹೋಗುತ್ತಿದ್ದಾರಾ. ಇವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಪಕ್ಕದ ತಟ್ಟೆಯನ್ನು ನೋಡುತ್ತಿದ್ದಾರೆ. ದೇವಸ್ಥಾನದ ತಟ್ಟೆಗೆ ಆಸೆ ಇಟ್ಕೊಂಡು ನೋಡ್ತಿದ್ದಾರೆ. ನಾಳೆಯೇ ಅಲ್ಲಿ ಆರತಿಗೊಂದು, ದೃಷ್ಟಿಗೊಂದು ರೇಟು ಅಂತ ಬೋರ್ಡ್ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಿಯಾಂಕ್ ಖರ್ಗೆಗೆ ತಿರುಗೇಟು

ತಮ್ಮ ವಿರುದ್ಧ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ತೇಜಸ್ವಿ ಸೂರ್ಯ, ಈಗಲಾದರೂ ಸ್ವಲ್ಪ ಸಿರಿಯಸ್ ವಿಚಾರಗಳ ಕುರಿತು ರಾಜಕಾರಣ ಮಾಡಿ. ಪ್ರಿಯಾಂಕ್ ಖರ್ಗೆ ಅವರೇ, ಸ್ವಲ್ಪ ಗಂಭೀರ ವಿಷಯಗಳಲ್ಲಿ ರಾಜಕೀಯ ಮಾಡಿ ಕಾಗಕ್ಕ-ಗೂಬಕ್ಕನ ಕಥೆ ಇಟ್ಟುಕೊಂಡು ರಾಜಕೀಯ ಮಾಡಿದ್ರೆ ನಿಮ್ಮ ಹುದ್ದೆಗೆ ಘನತೆ ಬರುವುದಿಲ್ಲ ಎಂದು ತಿರುಗೇಟು ನೀಡಿದರು.

ವಿರೋಧ ಮಾಡುವುದಾದರೆ ಸೀರಿಯಸ್ ವಿಷಯಗಳಲ್ಲಿ ಚರ್ಚೆ ಮಾಡೋಣ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡೋಣ. ಚರ್ಚೆ ಮಾಡೋಣ. ನಿಮ್ಮ ಐಟಿ-ಬಿಟಿ ಇಲಾಖೆಯಲ್ಲಿ ಆಗಬೇಕಿರೋ ಕೆಲಸಗಳ ಬಗ್ಗೆ ಚರ್ಚೆ ಮಾಡೋಣ. ಊರಿಗೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಮಾತನಾಡಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net