ಸರ್ಕಾರದ ತಪ್ಪಿಗೆ ಪೊಲೀಸರ ತಲೆದಂಡ:  ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

mysore
Published on

ಮೈಸೂರು: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಅಮಾನತು ಮಾಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಸಿಎಂ, ಡಿಸಿಎಂ, ಗೃಹ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಬಿ.ರಾಜಶೇಖರ್ ಮಾತನಾಡಿ, ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ ಕಾಲ್ತುಳಿತ ಉಂಟಾಗಿ 11 ಜನರ ಸಾವಿಗೆ ಕಾರಣವಾಗಿದೆ.

ಈ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ದಿಢೀರ್ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ಈ ಅನಾಹುತವಾಗಿದೆ ಎಂದು ಕಿಡಿಕಾರಿದರು.

ಪೊಲೀಸರು ವಿಜಯೋತ್ಸವ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದು, ಸರ್ಕಾರದ ಒತ್ತಡದಿಂದ ಕಾರ್ಯಕ್ರಮ ನಡೆದಿದೆ. ದಿಢೀರ್ ನಡೆದ ಕಾರ್ಯಕ್ರಮವಾಗಿದ್ದರಿಂದ ಲಕ್ಷಗಟ್ಟಲೆ ಜನರು ಸೇರಿದ್ದಾರೆ. ಈ ನಿಟ್ಟಿನಲ್ಲಿ ಗುಪ್ತಚಾರ ಇಲಾಖೆ ವೈಫಲ್ಯಕ್ಕೂ ಸರ್ಕಾರವೇ ಕಾರಣವಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರನ್ನು ಸರ್ಕಾರ ಅಮಾನತು ಮಾಡಿರುವುದು ಖಂಡನೀಯ. ಕೂಡಲೇ ಈ ಅಮಾನತು ಆದೇಶವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು

ಮುಖಂಡರಾದ ಮಂಜುಳಾ, ಸಂತೋಷ್, ಶ್ರೀನಿವಾಸ್, ಪ್ರತಾಪ್ ಕರ್ತಾಳು, ಅನುರಾಜ್, ಸಿಂಧುವಳ್ಳಿ ಶಿವಕುಮಾರ್, ಮಹದೇವಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net