ಸರ್ಕಾರದ ಆಶೋತ್ತರಗಳನ್ನು ಜನರಿಗೆ ತಲುಪಿಸಿ:ರಾಜೇಂದ್ರ ಕುಮಾರ್ ಕಟಾರಿಯಾ

ಸರ್ಕಾರದ ಆಶೋತ್ತರಗಳನ್ನು ಜನರಿಗೆ ತಲುಪಿಸಿ:ರಾಜೇಂದ್ರ ಕುಮಾರ್ ಕಟಾರಿಯಾ
Published on

ಹಾಸನ: ಸರ್ಕಾರದ ಆಶೋತ್ತರಗಳನ್ನು ಜನರಿಗೆ ತಲುಪಿಸಲು ಕಂದಾಯ ಇಲಾಖೆಯ ಪಾತ್ರ ದೊಡ್ಡದ್ದು. ಈ ನಿಟ್ಟಿನಲ್ಲಿ ಇಲಾಖೆ ಕೆಲಸಗಳಿಗೆ ಹೆಚ್ಚು ಒತ್ತು ನೀಡಿ ನಿಗದಿತ ಸಮಯಕ್ಕೆ ಸವಲತ್ತುಗಳು ಜನರಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೈಸೂರು ವಿಭಾಗದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾ ಹಂತದಲ್ಲಿ ಯೋಜನೆ ಮಾಡಿಕೊಂಡು ಕೆಲಸ ನಿರ್ವಹಿಸಲು ಅಧಿಕಾರಿಗಳಗೆ ನಿರ್ದೇಶನ ನೀಡಿದರು.

ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹಂತದ ಕೋರ್ಟ್‌ನಲ್ಲಿ ಬಾಕಿ ಇರುವ ಹಳೆಯ ಪ್ರಕರಣಗಳನ್ನು ನ್ಯಾಯಯುತವಾಗಿ ಆದಷ್ಟು ಶೀಘ್ರ ಪೂರ್ಣಗೊಳಿಸಿ. ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಕೆರೆಗಳ ಒತ್ತುವರಿ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರಲ್ಲದೆ ಸರ್ಕಾರಿ ಜಾಗ ಸಂರಕ್ಷಣೆಗೆ ನಿಗಾ ವಹಿಸಬೇಕು. ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಪಡೆಯುತ್ತಿರುವವರಿಂದ ಒಪ್ಪಿಗೆ ಪತ್ರ ಹಾಗೂ ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಸ್ವೀಕರಿಸಿ ಬ್ಯಾಂಕ್ ಖಾತೆಗೆ ಜೋಡಣೆ ಮಾಡುವಂತೆ ತಿಳಿಸಿದರು.

ಭೂ ಮಾಪನ ಮತ್ತು ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆಯ ಆಯುಕ್ತ ಶ್ರೀಧರ್, ಅಟಲ್ ಜನಸ್ನೇಹಿ ಕೇಂದ್ರದ ನಿರ್ದೇಶಕ ಕರೀಗೌಡ, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಅಪರ ಜಿಲ್ಲಾಧಿಕಾರಿ ಆನಂದ್, ಉಪವಿಭಾಗಧಿಕಾರಿಗಳಾದ ಅನ್ಮೋಲ್ ಜೈನ್, ಮಹಮ್ಮದ್ ನಸಿಮ್ ಹಾಗೂ ಜಿಲ್ಲೆಯ ಎಲ್ಲ ತಾಲೂಕು ತಹಸೀಲ್ದಾರ್‌ಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net