ಸರ್ಕಾರದ ಅಭಿವೃದ್ಧಿ ತಿಳಿಸಿ ಚುನಾವಣೆ ಎದುರಿಸಿ: ಎಂ.ಬಿ.ಭಾನುಪ್ರಕಾಶ್

SGR WEB 222
Published on

ಸಾಗರ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುತ್ತಿರುವ ರೀತಿಯನ್ನು ಇಡೀ ಪ್ರಪಂಚ ಗಮನಿಸುತ್ತಿದೆ. ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಹಾಕಿದೆ ಎಂದು ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಂ.ಬಿ.ಭಾನುಪ್ರಕಾಶ್ ಹೇಳಿದರು.

ನಗರದಲ್ಲಿ ಶನಿವಾರ ಬಿಜೆಪಿ ಗ್ರಾಮಾಂತರ ಘಟಕದ ಕಾರ್ಯಕಾರಣಿಯಲ್ಲಿ ಮಾತನಾಡಿ, ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವತ್ತ ಇಂತಹ ಕಾರ್ಯಕಾರಣಿ ಅತಿಮುಖ್ಯವಾಗಿದೆ ಎಂದರು.

ಮುಂದಿನ ಚುನಾವಣೆಯನ್ನು ಸರ್ಕಾರದ ಅಭಿವೃದ್ಧಿಯನ್ನು ಹೇಳಿ ಎದುರಿಸಬೇಕು. ಎಲ್ಲ ಕಡೆ ಮೋದಿ ಅವರು ಬಂದು ಮತ ಕೇಳಲು ಆಗುವುದಿಲ್ಲ. ಪಕ್ಷಕ್ಕೆ ನರೇಂದ್ರ ಮೋದಿ ಅವರು ಸ್ಫೂರ್ತಿಯಾಗಿದ್ದಾರೆ. ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ. ಕೇಂದ್ರ ಮತ್ತು ರಾಜ್ಯ ಸರ್ಕರದ ಜನಮುಖಿ ಸಾಧನೆಗಳನ್ನು ಜನತೆಗೆ ತಲುಪಿಸುವ ಪ್ರಮಾಣೀಕ ಕೆಲಸ ನಮ್ಮ ದಾಗಬೇಕು ಎಂದರು.

ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಬಿಜೆಪಿ ಅಧಿಕಾರ ಹಿಡಿಯಲು ಇರುವ ಪಕ್ಷವಲ್ಲ. ಅಧಿಕಾರ ನೆಪ ಮಾತ್ರಕ್ಕಾಗಿದ್ದು ಸರ್ವಜನಾಂಗದ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ ತೊಟ್ಟು ಕೆಲಸ ಮಾಡಲಾಗುತ್ತಿದೆ. ಶೇ. 75ಕ್ಕೂ ಹೆಚ್ಚು ಸಂಕಲ್ಪ ಈಡೇರಿದೆ. ಕಾರ್ಯಕರ್ತರು ಧೈರ್ಯದಿಂದ ಮತದಾರರ ಎದುರು ಹೋಗುವ ವಾತಾವರಣ ನಿರ್ಮಾಣ ಮಾಡಿದ್ದೇವೆ. ಇನ್ನೂ ಏನಾದರೂ ನ್ಯೂನ್ಯತೆಗಳು ಇದ್ದರೆ ನಮ್ಮ ಗಮನಕ್ಕೆ ತನ್ನಿ. ಸರಿಪಡಿಸಿಕೊಂಡು ಮುನ್ನಡೆಯೋಣ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಭಾರಿ ಕುಪೇಂದ್ರ ಆಯನೂರು, ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕೆರೆಕೈ. ದೇವೇಂದ್ರಪ್ಪ ಯಲಕುಂದ್ಲಿ. ಗ್ರಾಮಾಂತರ ಘಟಕದ ಅಧ್ಯಕ್ಷ ಲೋಕನಾಥ ಬಿಳಿಸಿರಿ, ಚಂದ್ರಶೇಖರ ಮಡಸೂರು, ಕೆ.ಎಸ್.ಗೌತಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net