

ಹೊಳೆನರಸೀಪುರ: ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು, ಬೀದಿ ದೀಪ, ಪರಿಸರ ಮಾಲಿನ್ಯಕ್ಕೆ ಅವಕಾಶವಾಗದಂತೆ ಚರಂಡಿಗಳ ಸ್ವಚ್ಛತೆ ಮತ್ತು ಸರ್ಕಾರದ ಅನುದಾನಗಳ ಸದ್ಬಳಕೆ ಜತೆಗೆ ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಲು ಸದಸ್ಯರ ಸಹಕಾರ ಅಗತ್ಯವೆಂದು ಓಡನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಪಿ.ಶ್ರುತಿ ಕುಮಾರ್ ತಿಳಿಸಿದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಓಡನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಸದಸ್ಯರು ಅಗತ್ಯ ಸಲಹೆಗಳನ್ನು ನೀಡಲಿದ್ದಾರೆ. ಪಿಡಿಒ ಅವರು ಸರ್ಕಾರದ ಅನುದಾನಗಳ ಬಗ್ಗೆ ತಿಳಿಸುತ್ತಾರೆ. ಅಗತ್ಯವಿರುವ ಗ್ರಾಮಗಳಲ್ಲಿ ಯೋಜನೆಗಳನ್ನು ಅನುಷ್ಠಾನ ಮಾಡೋಣ ಎಂದರು.
ಗ್ರಾಮ ಪಂಚಾಯಿತಿ ಉಪಧ್ಯಾಕ್ಷ ಜೆ.ಎಸ್. ಚಂದ್ರಶೇಖರ್ ಮಾತನಾಡಿ, ರಾಜಕಾರಣವನ್ನು ಚುನಾವಣೆ ಸಂದರ್ಭಕ್ಕೆ ಮಾತ್ರ ಸೀಮಿತಗೊಳಿಸೋಣ. ಗ್ರಾಮೀಣ ಪ್ರದೇಶದಲ್ಲಿ ರೈತರ ಸಂಕಷ್ಟವನ್ನು ಕಂಡಿರುವ ನಾವು ನಮಗೆ ದೊರೆತಿರುವ ಈ ಅವಕಾಶವನ್ನು ಗ್ರಾಮಗಳ ಅಭಿವೃದ್ಧಿಗೆ ಬಳಸಿಕೊಂಡು, ಎಲ್ಲರೂ ಸಹಬಾಳ್ವೆಯಿಂದ ನೆಮ್ಮದಿಯಾಗಿ ಬಾಳೋಣ ಎಂದರು.
ಓಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ ವಿಷಕಂಠಯ್ಯ, ಕಾರ್ಯದರ್ಶಿ ಮಹಾದೇವಪ್ಪ, ಬಿಲ್ ಕಲೆಕ್ಟರ್ ಮಂಜೇಗೌಡ ಹಾಗೂ ಸಿಬ್ಬಂದಿ ಇದ್ದರು.