ಸರ್ಕಾರದ ಅನುದಾನ ಪಾರದರ್ಶಕವಾಗಿ ಬಳಕೆಯಾಗಲಿ : ಎಂ.ಎ.ಗೋಪಾಲಸ್ವಾಮಿ

ಸರ್ಕಾರದ ಅನುದಾನ ಪಾರದರ್ಶಕವಾಗಿ ಬಳಕೆಯಾಗಲಿ : ಎಂ.ಎ.ಗೋಪಾಲಸ್ವಾಮಿ
Published on

ಚನ್ನರಾಯಪಟ್ಟಣ: ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ನೀಡುವ ಅನುದಾನ ಪಾರದರ್ಶಕವಾಗಿ ಸದ್ಬಳಕೆಯಾಗದಿರುವುದು ಖಂಡನೀಯ ಎಂದು ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಆರೋಪಿಸಿದರು.


ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಹಣಾಧಿಕಾರಿಯನ್ನು ಶನಿವಾರ ಭೇಟಿ ಮಾಡಿ ಅವರಿಗೆ ದಾಖಲೆಗಳನ್ನು ನೀಡಿ ಮಾತನಾಡಿ, ಹಿಂಬಾಲಕರ ಆರ್ಥಿಕ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದರು.


ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಗಳನ್ನು ಬಳಸಿಕೊಂಡು ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಅನುದಾನವನ್ನು ದುರ್ಬಳಕೆ ಮಾಡುತ್ತಿದ್ದಾರೆ. ತಪಿತಸ್ಥ ಪಿಡಿಒಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.


ನರೇಗಾ ಯೋಜನೆಯಡಿ 35 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಈ ಪೈಕಿ ಆದೆಷ್ಟೂ ಕಾಮಗಾರಿಗಳನ್ನು ನಿರ್ವಹಿಸದೇ ಶಾಸಕರ ಆಪ್ತರಿಗೆ ಬಿಲ್ ನೀಡಲಾಗಿದೆ. ಇದರಲ್ಲಿ ಅವರಿಗೂ ಕಮಿಷನ್ ಇರುವ ಸಂಶಯವಿದೆ ಎಂದು ತಿಳಿಸಿದರು.


ಬಾಗೂರು ಹಾಗೂ ಮಟ್ಟನವಿಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಕಾಂಕ್ರೀಟಿಕರಣಗೊಂಡಿರುವ ರಸ್ತೆಗಳ ಹಳೇ ಪೋಟೋಗಳನ್ನು ಲಗತ್ತಿಸಿ ತಲಾ 10 ಲಕ್ಷ ರೂ. ಹಣ ಪಡೆಯಲಾಗಿದೆ. ಈ ಕುರಿತು ಪರಿಶೀಲನೆಗೆ ಬಂದ ಅಧಿಕಾರಿಗಳು ಕಾಮಗಾರಿ ಆಗದಿರುವುದನ್ನು ಗಮನಿಸಿ 1.5 ಲಕ್ಷ ರೂ. ದಂಡ ಹಾಕಿದ್ದಾರೆ ಎಂದರು.


ಮನೆ ಹಂಚಿಕೆಯಲ್ಲಿ ಏಕಾಧಿಪತ್ಯ:
ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ತಾಲೂಕಿಗೆ 1400 ಮನೆಗಳನ್ನು ನೀಡಿದೆ. ಅರ್ಹರನ್ನು ಗುರ್ತಿಸುವ ಸಲುವಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ಹಾಗೂ ವಾರ್ಡ್ ಸಭೆ ನಡೆಸಬೇಕೆಂಬ ನಿಯಮವನ್ನು ಮೀರಿ ಶಾಸಕರ ಮನೆಯಲ್ಲಿ ಸಿದ್ಧವಾಗುವ ಪಟ್ಟಿಗೆ ಗ್ರಾಮ ಪಂಚಾಯಿತಿ ಪಿಡಿಒ ಗಳು ಮುದ್ರೆ ಹೊತ್ತಿ ತಾಲೂಕು ಪಂಚಾಯಿತಿಗೆ ಕಳುಹಿಸಬೇಕು. ನಮ್ಮ ಬೆಂಬಲಿತ ಸದಸ್ಯರು ಕೇಳಿದ್ರೆ ಅವರಿಗೆ ಭೀಕ್ಷೆ ನೀಡುವಂತೆ ಒಂದೆರೆಡು ಮನೆ ನೀಡುತ್ತಾರೆ. ಗೌಡಗೆರೆ, ಎಂ.ಶಿವರ, ಮಟ್ಟನವಿಲೆ, ಕಾಂತರಾಜಪುರ ಸೇರಿ ನಾಲ್ಕೈದು ಪಂಚಾಯಿತಿಗಳಲ್ಲಿ ನಮ್ಮ ಸದಸ್ಯರಿಗೆ ಮನೆ ನೀಡದೇ ಚುನಾವಣೆಯಲ್ಲಿ ಸೋತ ಅವರ ಬೆಂಬಲಿತರಿಗೆ ಮನೆ ಹಂಚುವ ಅಧಿಕಾರ ನೀಡಿದ್ದಾರೆ ಎಂದು ಆರೋಪಿಸಿದರು.


35 ಪಂಚಾಯಿತಿಗಳಲ್ಲಿ ಮನೆ ಹಂಚಿಕೆಯಲ್ಲಿ ಆಗಿರುವ ಲೋಪದ ಕುರಿತಾಗಿ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದೆ. ಇನ್ನೂ ಜಿಪಂ ಸಿಎಸ್ ಅವರಿಗೆ ದೂರವಾಣಿ ಮೂಲಕ 2-3 ಬಾರಿ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇನ್ನೂ ಶ್ರವಣಬೆಳಗೊಳ ಪಿಡಿಓ 20 ಲಕ್ಷ ರೂ. ಸುಂಕದ ಹಣವನ್ನು ವೈಯಕ್ತಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಖರ್ಚು-ವೆಚ್ಚದ ಮಾಹಿತಿ ನೀಡುವಂತೆ ಕೇಳಲಾಗಿ ತಿಂಗಳು ಕಳೆದರೂ ಉತ್ತರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ತಾಲೂಕು ಬೋರ್ಡ್ ಮಾಜಿ ಅಧ್ಯಕ್ಷ ಸಿ.ಎಸ್.ಜಯರಾಂ, ಮುಖಂಡ ಮಿಲ್ಟ್ರಿಮಂಜು ಹಾಗೂ ಇತರರು ಇದ್ದರು.

''ನಾನು ಎಂಎಲ್ಸಿ ಆಗಿದ್ದ ವೇಳೆ 2019 ರಲ್ಲಿ 3054 ಯೋಜನೆಯಡಿ 20 ಲಕ್ಷ ರೂ. ಗಳಲ್ಲಿ ಬಾಗೂರು ಚೌಡೇನಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆದೇ ರಸ್ತೆಗೆ ನರೇಗಾದಡಿ 10 ಲಕ್ಷ ರೂ. ಹಣ ಬಿಲ್ ಮಾಡಿಕೊಳ್ಳಲಾಗಿದೆ. ಪರಿಶೀಲನೆ ವೇಳೆ ಕೆಲಸ ಮಾಡದಿರುವುದು ದೃಡೀಕರಣಗೊಂಡ ಹಿನ್ನಲೆಯಲ್ಲಿ 1.5 ಲಕ್ಷ ರೂ. ದಂಡ ಹಾಕಲಾಗಿದೆ.''


ಎಂ.ಎ.ಗೋಪಾಲಸ್ವಾಮಿ, ಮಾಜಿ ಎಂಎಲ್‌ಸಿ.

''ಗ್ರಾಮಸಭೆ ಆಗದೇ ಅರ್ಹರನ್ನು ಗುರ್ತಿಸುವ ಕೆಲಸವಾಗಿರುವುದು ಊರ್ಜಿತವಲ್ಲ. ಇದಕ್ಕೆ ಕಾನೂನಿನಲ್ಲಿ ಬೆಲೆಯಿಲ್ಲ. ಇನ್ನೂ 20 ಲಕ್ಷರೂ. ಖರ್ಚು ಮಾಡಿರುವ ಪಿಡಿಓ ಗೆ 7 ದಿನದಲ್ಲಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.''

ಸುನೀಲ್‌ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net