

ಬೆಂಗಳೂರು ಗ್ರಾಮಾಂತರ: ಯಾವುದೇ ಸರ್ಕಾರಗಳು ರೈತ ವಿರೋಧಿಯಲ್ಲ. ಕೃಷಿ ಕಾಯ್ದೆಗೆ ಸಂಬಂಧಪಟ್ಟಂತೆ ರೈತರಿಗೆ ಮಾರಕವಾದ ಅಂಶಗಳಿದ್ದರೆ ಅದನ್ನು ಬದಲಿಸುವ ಬಗ್ಗೆ ರೈತ ಮುಖಂಡರು ಸರ್ಕಾರದೊಂದಿಗೆ ಮುಖಾಮುಖಿ ಚರ್ಚಿಸಿ ಬಗೆಹರಿಸಿಕೊಳ್ಳಬಹುದು. ಸರ್ಕಾರಗಳನ್ನು ರೈತವಿರೋಧಿ ಎಂಬಂತೆ ಬಿಂಬಿಸುವ ಔಚಿತ್ಯವಿಲ್ಲ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆಯ ರಾಷ್ಟ್ರೀಯ ಹೆದ್ದಾರಿ-4ರಿಂದ ರಾಜ್ಯ ಹೆದ್ದಾರಿ-95 ಸಂಪರ್ಕಿಸುವ ಅತ್ತಿವಟ್ಟ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ರೈತರೇ ದೇಶದ ಬೆನ್ನೆಲುಬು, ರೈತರು ಬೆಳೆ ಬೆಳೆಯದಿದ್ದರೆ ನಾವೆಲ್ಲ ಬದುಕುವುದಾದರೂ ಹೇಗೆ, ರೈತರನ್ನು ಸಂಕಷ್ಟಕ್ಕೆ ತಳ್ಳುವ ಯಾವುದೇ ಉದ್ದೇಶ ಸರ್ಕಾರಗಳಿಗಿಲ್ಲ, ಈ ಬಗ್ಗೆ ಕೆಲವೊಂದು ಗೊಂದಲಗಳಿದ್ದು ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ಯೋಜನೆ ಸಂಪೂರ್ಣ ಅನುಷ್ಟಾನ: ಸರ್ಕಾರದ ವಿವಿಧ ಯೋಜನೆಗಳಡಿ ಬಿಡುಗಡೆಯಾಗುವ ಪ್ರತಿ ಅನುದಾನವನ್ನು ಹೊಸಕೋಟೆ ತಾಲೂಕಿನಲ್ಲಿ ಸಂಪೂರ್ಣ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.
ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ 18 ಕೋಟಿ ರೂ.ವಿಶೇಷ ಅನುದಾನದಡಿ ಕೆಲವೊಂದು ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತು. ನೀರಿನ ತೀವ್ರ ಸಮಸ್ಯೆಯಿರುವ ಗ್ರಾಮಗಳಲ್ಲಿ ಈಗಾಗಲೇ 25ಕ್ಕೂ ಹೆಚ್ಚು ಬೋರ್‌ವೆಲ್ ಕೊರೆಸಿ ಪೈಪ್‌ಲೈನ್ ಸಂಪರ್ಕ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ವರ್ಷ ಸರ್ಕಾರ 14ನೇ ಹಣಕಾಸು ಸಹ ಬಿಡುಗಡೆಮಾಡಿದೆ, ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ, ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ತಾಲೂಕಿನ 4 ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತಿ ಪಂಚಾಯಿತಿಯಲ್ಲೂ 25 ಲಕ್ಷ ರೂ.ಮೊತ್ತದಲ್ಲಿ ಮೂಲಸೌಕರ್ಯ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
ಶಾಸಕರ ವಿರುದ್ಧ ಮತ್ತೆ ಕಿಡಿ: ನಮ್ಮ ಅನುದಾನದಲ್ಲಿ ನಡೆಯುವ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸುವುದು ಮಾಮೂಲಿ. ಮಾತೆತ್ತಿದರೆ ಶಿಷ್ಟಾಚಾರ ಎನ್ನುವ ಶಾಸಕರಿಗೆ ಇಂಥದ್ದರ ಬಗ್ಗೆ ಅರಿವಿಲ್ಲದಂತಾಗಿದೆ ಎಂದು ಎಂಟಿಬಿ ನಾಗರಾಜ್ ಕಿಡಿಕಾರಿದರು. ಸಚಿವರು ನಡೆಸುವ ಭೂಮಿಪೂಜೆಗೆ ಮುನ್ನವೇ ಶಾಸಕರು ಅದೇ ಕಾಮಗಾರಿಗೆ ಚಾಲನೆ ನೀಡುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನರೇಗಾ ಕಾಮಗಾರಿಗಳಿಗೂ ಶಾಸಕರು ಗುದ್ದಲಿ ಹಿಡಿದು ಹೊರಡುತ್ತಾರೆ. ನಾನು ಶಾಸಕನಾಗಿದ್ದಾಗ ಯಾವುದೇ ನರೇಗಾ ಕಾಮಗಾರಿ ಚಾಲನೆಗೂ ಹೋಗುತ್ತಿರಲಿಲ್ಲ, ಅಲ್ಲಿನ ಅಧ್ಯಕ್ಷ, ಸದಸ್ಯರೇ ನೆರವೇರಿಸುತ್ತಿದ್ದರು ಎಂದರು.