

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ತಿದ್ದುಪಡಿಗಳು ರೈತ ವಿರೋಧಿಯಾಗಿವೆ ಎಂದು ಆರೋಪಿಸಿ ಶನಿವಾರ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ನಗರದಲ್ಲಿ ಸ್ವಾತಂತ್ರ್ಯ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದರು.
ನಗರದ ಶಿವಪ್ಪನಾಯಕ ಪ್ರತಿಮೆಯಿಂದ ನೆಹರು ರಸ್ತೆ, ಗೋಪಿ ವೃತ್ತ ಮಾರ್ಗವಾಗಿ ಗಾಂಧಿ ಪಾರ್ಕ್ನಲ್ಲಿರುವ ಗಾಂಧಿ ಪ್ರತಿಮೆವರೆಗೂ ಕಪ್ಪು ಬಟ್ಟೆ ಧರಿಸಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ದೇಶಾದ್ಯಂತ ಕರೊನಾ ವೈರಸ್ ವ್ಯಾಪಿಸುತ್ತಿರುವ ಸಂದರ್ಭ ದುರುಪಯೋಗ ಪಡಿಸಿಕೊಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ರೈತರ ಬದುಕನ್ನು ಬೀದಿಗೆ ತಂದು ವಿದೇಶಿ ಬಂಡವಾಳಶಾಹಿಗಳಿಗೆ ಕೆಂಪು ಹಾಸು ಹಾಸಿವೆ ಎಂದು ದೂರಿದರು.
ರೈತ ಮುಖಂಡ ಕೆ.ಟಿ.ಗಂಗಾಧರ ಮಾತನಾಡಿ, ರೈತನ ಉತ್ಪಾದನಾ ಭೂಮಿಯನ್ನು ಖಾಸಗಿ, ಬಂಡವಾಳಶಾಹಿಗಳಿಗೆ ವರ್ಗಾಯಿಸುತ್ತಿದೆ. ಉತ್ಪಾದನಾ ಹಕ್ಕನ್ನು ರೈತರಿಂದ ಕಿತ್ತುಕೊಳ್ಳಲಾಗುತ್ತಿದೆ. 40 ವರ್ಷಗಳಿಂದ ರೈತರ ನ್ಯಾಯಸಮ್ಮತವಾದ ಹಕ್ಕುಗಳಿಗಾಗಿ ಸಂವಿಧಾನಬದ್ಧವಾಗಿ ಹಾಗೂ ಅಹಿಂಸಾತ್ಮಕವಾಗಿ ಹೋರಾಟ ಚಳವಳಿಗಳನ್ನು ಮಾಡುತ್ತಾ ಬಂದಿದ್ದರೂ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿದರು.
ಶಿವಪ್ಪ ನಾಯಕ ವೃತ್ತದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದ ರೈತ ಮುಖಂಡರು, ಶಿವಪ್ಪನಾಯಕ ಪ್ರತಿಮೆ ಹಾಗೂ ಪಾಲಿಕೆ ಆವರಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗಾಂಧಿಪಾರ್ಕ್ನ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು.
ಮುಖಂಡರಾದ ಎಚ್.ಜಯಪ್ಪಗೌಡ, ಹಿರಿಯಣ್ಣಯ್ಯ, ಡಿ.ವಿ.ವೀರೇಶ್, ಯಶವಂತರಾವ್ ಘೊರ್ಪಡೆ, ರಾಮಚಂದ್ರರಾವ್ ಮತ್ತಿತರರು ಉಪಸ್ಥಿತರಿದ್ದರು.