

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಸಂಯುಕ್ತ ಹೋರಾಟ-ಕರ್ನಾಟಕದಿಂದ ಡಿಸಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಪ್ರಮುಖರು, ರೈತ ವಿರೋಧಿ ನೀತಿಗಳನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರಗಳನ್ನು ಒತ್ತಾಯಿಸಿದರು. ಅಧಿಕಾರಕ್ಕೆ ಬಂದರೆ ರೈತ, ಜನವಿರೋಧಿ ನೀತಿಗಳನ್ನು ಹಿಂಪಡೆಯುವುದಾಗಿ ಹೇಳಿ ಈಗ ಮರೆತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಬಹಿರಂಗ ಹೇಳಿಕೆ ಬಿಡುಗಡೆ ಮಾಡಿದರು. ಅದಕ್ಕೂ ಮೊದಲು ವೀರ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂ, ಎಪಿಎಂಸಿ ಹಾಗೂ ಜಾನುವಾರು ತಿದ್ದುಪಡಿ ಕಾಯಿದೆಗಳನ್ನು ರದ್ದುಗೊಳಿಸಬೇಕು. ಬೆಳಗಾವಿ ಅಕ್ರಮ ಮೊದಲ ಖಾಸಗಿ ತರಕಾರಿ ಮಾರುಕಟ್ಟೆ ಬಂದ್ ಮಾಡಿ ಎಪಿಎಂಸಿ ಆವರಣದಲ್ಲೇ ತರಕಾರಿ ಮಾರುಕಟ್ಟೆ ಮರು ಆರಂಭಿಸಬೇಕು.
ಕೃಷಿ ವಿದ್ಯುತ್ ಸಂರ್ಪಕಕ್ಕೆ ಪ್ರೀಪೇಯ್ಡ ಸ್ಮಾರ್ಟ್ ಮೀಟರ್ ಅಳವಡಿಸಬಾರದು. ಸ್ವಯಂ ವೆಚ್ಚ ಯೋಜನೆ ರದ್ದುಗೊಳಿಸಬೇಕು. ವಿದ್ಯುತ್ ಕ್ಷೇತ್ರದ ಖಾಸಗೀಕರಣ ಬೇಡ. ಬಗರ್‌ಹುಕ್ಕುಂ ಸಾಗುವಳಿದಾರರನ್ನು ಒಕ್ಕೆಲೆಬ್ಬಿಸದೆ ಅವರಿಗೆ ಸಾಗುವಳಿ ಪತ್ರ ಕೊಡಬೇಕು. ಅರಣ್ಯ ಇಂಡೀಕರಣ ರದ್ದುಪಡಿಸಬೇಕು. ಸೂತಿಲ್ಲದ ರೈತರ ವಸತಿ ಸೌಲಭ್ಯಕ್ಕೆ ಬೃಹತ್ ಯೋಜನೆ ರೂಪಿಸಬೇಕು.
ಬಲವಂತದ ಭೂಸ್ವಾಧೀನ ಬೇಡ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆ ಅನುದಾನ ಬಳಕೆ, ಆದಿವಾಸಿ ಅಲೆಮಾರಿ ಸಮುದಾಯದ ಪುನರ್ವಸತಿ, ಮಹಿಳಾ ಸಬಲೀಕರಣ ಕುರಿತಂತೆ ಎರಡೂವರೆ ವರ್ಷಕ್ಕೆ ಒಮ್ಮೆ ಸಾಮಾಜಿಕ ನ್ಯಾಯಕ್ಕಾಗಿ ವಿಶೇಷ ಅಧಿವೇಶನ ನಡೆಸಬೇಕು. ಕಾರ್ಮಿಕರ ದುಡಿಮೆ ಅವಧಿಯನ್ನು 12ಗಂಟೆಗೆ ಏರಿಸಬಾರದು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ 1200 ಕೋಟಿ ರೂ.ಅನುದಾನ ಸಹಿತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ, ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಸಿಪಿಐ ಜಿಲ್ಲಾ ಸಂಚಾಲಕ ಜಿ.ಸಿ. ಸುರೇಶ್‌ಬಾಬು, ರಾಜ್ಯಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯದರ್ಶಿ ಕುಮಾರ್ ಸಮತಳ, ಕರ್ನಾಟಕ ಜನಶಕ್ತಿಯ ಟಿ. ಶಫಿವುಲ್ಲಾ, ಹಂಪಯ್ಯನ ಮಾಳಿಗೆ ಧನಂಜಯ, ಡಿಎಸ್‌ಹಳ್ಳಿ ಮಲ್ಲಿಕಾರ್ಜುನ್, ಸತ್ಯಪ್ಪ ಮಲ್ಲಾಪುರ, ಕೆ.ಸಿ.ಹೊರಕೇರಪ್ಪ, ಎಚ್.ಆರ್. ತಿಮ್ಮಯ್ಯ, ಕಬ್ಬಿಗೆರೆ ನಾಗರಾಜ್, ಹನುಮಂತಪ್ಪ ಮತ್ತಿತರರು ಪ್ರತಿಭಟನೆಯಲ್ಲಿದ್ದರು.