

ಚಿತ್ರದುರ್ಗ: ರಾಜ್ಯ ಸರ್ಕಾರಕ್ಕೆ ಗ್ಯಾರಂಟಿಗಳು ಹೊರೆಯಾಗಿಲ್ಲ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ 2.30 ಲಕ್ಷ ಕೋಟಿ ರೂ. ಮೊತ್ತದ ಅಡಿಷನಲ್ ವರ್ಕ್ ಆರ್ಡರ್ ಹೊರೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವುದಿಲ್ಲವೆಂದು ಸಿಎಂ, ಡಿಸಿಎಂ ಹೇಳಿದ್ದಾರೆ. ಕೆಲವು ಶಾಸಕರು, ಮಂತ್ರಿಗಳು ಅವರ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಹಿಂದಿನ ಸರ್ಕಾರದ ಅವಧಿಯ ಅನೇಕ ಹಗರಣಗಳಲ್ಲಿ ಬಿಜೆಪಿಯವರು ಸಿಕ್ಕು ಬೀಳುತ್ತಿದ್ದಾರೆ, ಈ ಕುರಿತ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಏನೆಂದು ಗೊತ್ತಾಗಲಿದೆ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಾಕಷ್ಟು ಮೊತ್ತವನ್ನು ರಿಕವರಿ ಮಾಡಿದೆ. ಇಡಿ ಅಧಿಕಾರಿಗಳೂ ತನಿಖೆ ನಡೆಸುತ್ತಿದ್ದಾರೆ. ಎಸ್‌ಐಟಿ ಕೂಡ ಆರೋಪಿತರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ ಎಂದರು.
ವಿದ್ಯುತ್, ಮೊಬೈಲ್ ನೆಟ್‌ವರ್ಕ್ ಮೊದಲಾದ ಮೂಲ ಸೌಕರ್ಯಗಳಿಂದ ವಂಚಿತವಾದ ಚಿತ್ರದುರ್ಗ ತಾಲೂಕು ಯರೇಹಳ್ಳಿಗೆ ಸದ್ಯದಲ್ಲೇ ಶಾಸಕರೊಂದಿಗೆ ಭೇಟಿ ನೀಡುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಬೀಜದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಭದ್ರಾ ಜಲಾಶಯ ಭರ್ತಿಯಾದರೆ ಹೊಸದುರ್ಗ ತಾಲೂಕಿನ ಸಾವಿರಾರು ಎಕರೆ ಜಮೀನು ಮುಳುಗಡೆ ಸಮಸ್ಯೆ ಕುರಿತು ಪರಿಶೀಲಿಸಲಾಗುವುದೆಂದರು.
ಚಿತ್ರದುರ್ಗದಲ್ಲಿ ಮಳೆ ನೀರು ಕಟ್ಟಡಗಳಿಗೆ ನುಗ್ಗಿರುವ ಸಮಸ್ಯೆಗೆ, ಒಳಚರಂಡಿ ಕಳಪೆ ಕಾಮಗಾರಿ ಕಾರಣವೆಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಡಿಸಿ ಟಿ.ವೆಂಕಟೇಶ್, ಎಸ್‌ಪಿ ಧರ್ಮೆಂದರ್‌ಕುಮಾರ್‌ಮೀನಾ, ಸಿಇಒ ಎಸ್.ಜೆ.ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್ ಇದ್ದರು.