ಸರ್ಕಾರಕ್ಕೆ ಮನಿ ಆರ್ಡರ್ ಚಳವಳಿ

22 Dwd 3
Published on

ಧಾರವಾಡ: ಮದ್ಯ ನಿಷೇಧಕ್ಕೆ ಆಗ್ರಹಿಸಿ ನಗರದ ಮಹಿಳೆಯರು ಸರ್ಕಾರಕ್ಕೆ ಮನಿ ಆರ್ಡರ್ ಚಳವಳಿ ನಡೆಸುವ ಮೂಲಕ ಗಮನ ಸೆಳೆದರು.

ನಗರದ ಮುರುಘಾಮಠ ಆವರಣದಲ್ಲಿನ ಅಂಚೆ ಕಚೇರಿ ಎದುರು ಜಮಾಯಿಸಿದ ಮಹಿಳೆಯರು, ‘ಬೀರು ಬೇಡ... ನೀರು ಬೇಕು’, ‘ಮದ್ಯ ಮಾರಾಟ ನಿಷೇಧಿಸಿ ಮನುಷ್ಯರ ಜೀವ ಉಳಿಸಿ’, ‘ಅಮಲು ಮುಕ್ತ ಸಮಾಜ ಆರೋಗ್ಯಯುಕ್ತ ದೇಶ’, ‘ಕುಡಿತದ ರಾಜ್ಯ ಬೇಕಾಗಿಲ್ಲ, ಗಾಂಧೀಜಿ ಕಂಡ ಗ್ರಾಮಸ್ವರಾಜ್ಯ ಬೇಕು’ ಎಂಬಿತ್ಯಾದಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟಿಸಿದರು. ಲಾಕ್​ಡೌನ್ ಸಂದರ್ಭದಲ್ಲಿ ಲಕ್ಷಾಂತರ ಮದ್ಯ ವ್ಯಸನಿಗಳು ಮದ್ಯ ಸೇವನೆಯ ಚಟದಿಂದ ಮುಕ್ತರಾಗಿದ್ದರು. ಕುಟುಂಬಗಳಲ್ಲಿ ನೆಮ್ಮದಿ, ಶಾಂತಿ ನೆಲೆಸಿ ಮಹಿಳೆಯರು, ಮಕ್ಕಳು ಹಿಂಸೆ ರಹಿತ ದಿನಗಳನ್ನು ಕಾಣಲು ಸಾಧ್ಯವಾಗಿತ್ತು. ಆದರೆ, ಸರ್ಕಾರ ಆದಾಯದ ನೆಪ ಹೇಳಿ ಮತ್ತೆ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದೆ. ಮದ್ಯ ಸೇವನೆಯಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಜೀವನ ನಿರ್ವಹಣೆಗಾಗಿ ಜನಧನ, ಕಾರ್ವಿುಕರ ಕಾರ್ಡ್​ಗಳಿಗೆ ಜಮಾ ಆದ ಹಣವೂ ಮದ್ಯದ ಅಂಗಡಿಗಳ ಮೂಲಕ ಸರ್ಕಾರದ ಖಜಾನೆ ಸೇರಿದೆ. ಆದಾಯಕ್ಕಾಗಿ ಹಾತೊರೆಯುತ್ತಿರುವ ಸರ್ಕಾರದ ಖಜಾನೆಗೆ ಸಾಂಕೇತಿಕವಾಗಿ ಹಣ ತುಂಬುತ್ತೇವೆ. ಆದರೆ, ಮದ್ಯ ನಿಷೇಧ ಮಾಡಿ ಮಹಿಳೆಯರು ಬದುಕಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಇದೇವೇಳೆ ಮಹಿಳೆಯರು ತಮ್ಮ ಕೈಲಾದಷ್ಟು ಹಣವನ್ನು ಮನಿ ಆರ್ಡರ್ ಮೂಲಕ ಮುಖ್ಯಮಂತ್ರಿಗೆ ರವಾನಿಸಿದರು. ಗೌರಮ್ಮ ನಾಡಗೌಡರ ನೇತೃತ್ವದಲ್ಲಿ ನಡೆದ ವಿನೂತನ ಪ್ರತಿಭಟನೆಯಲ್ಲಿ ಮಹಾದೇವಿ ಬ್ಯಾಳಿ, ಶಶಿಕಲಾ ಚಿಕ್ಕಮಠ, ಶಾರದಾ ಬಳ್ಳೂರ, ಗಿರಿಜವ್ವ ಸಬರದ, ಮಂಜುಳಾ ಪೂಜಾರ, ಲಕ್ಷ್ಮೀ ದಾಸನವರ, ಇತರರಿದ್ದರು.

=========

ಜಿಲ್ಲೆಯ ಮತ್ತಿಬ್ಬರಿಗೆ ಸೋಂಕು

ವಿಜಯವಾಣಿ ಸುದ್ದಿಜಾಲ ಧಾರವಾಡ

ಅವರು ಎಳೆ ಯುವಕರು. ಉದ್ಯೋಗಕ್ಕಾಗಿ ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧರಿರುವ ಉತ್ಸಾಹಿಗಳು. ಅವಕಾಶ ಸಿಕ್ಕಿದ್ದು ದೇಶದ ರಾಜಧಾನಿಯಲ್ಲಿ. ಬಿಪಿಒ ಕಂಪನಿಯೊಂದರಲ್ಲಿ ನೌಕರಿ. ದೆಹಲಿಯನ್ನು ಕರೊನಾ ವೈರಸ್ ಜಾಸ್ತಿ ಪ್ರಮಾಣದಲ್ಲೇ ಬಾಧಿಸುತ್ತಿದೆ. ಹೀಗಾಗಿ, ಅಲ್ಲಿಂದ ಹೊರಟು ಪ್ರಯಾಸದಿಂದ ಜಿಲ್ಲೆಗೆ ಮರಳಿದ್ದಾರೆ. ದುರ್ದೈವ ಎಂದರೆ, ಹಾಗೆ ಮರಳಿದ ಮೂವರಲ್ಲಿ ಇಬ್ಬರ ಗಂಟಲನ್ನು ಕರೊನಾ ವೈರಸ್ ಆಗಲೇ ಸೇರಿಕೊಂಡು ಬಿಟ್ಟಿದೆ.

ಇವರನ್ನು ಪಿ 1609 ಹಾಗೂ ಪಿ 1610 ಎಂದು ಗುರುತಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಈ ಇಬ್ಬರ ಪ್ರಯಾಣ ವಿವರಗಳನ್ನು ಜಿಲ್ಲಾಡಳಿತ ಪ್ರಕಟಿಸಿದೆ.

ಕುಂದಗೋಳ ತಾಲೂಕು ಗುರುವಿನಹಳ್ಳಿಯ 22 ವರ್ಷದ ಪುರುಷ (ಪಿ 1609 ) ಹಾಗೂ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದ 23 ವರ್ಷದ ಯುವಕ (ಪಿ 1610), ಈ ಇಬ್ಬರಲ್ಲಿ ಕರೊನಾ ಕಾಣಿಸಿಕೊಂಡಿದೆ.

ಇವರು ಸೇರಿ ರಾಜ್ಯದ 7 ಜನರು ಐದಾರು ತಿಂಗಳಿಂದ ದೆಹಲಿಯ ಬಿಪಿಒ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ 6 ಜನರು ಮೇ 14ರಂದು ಬೆಳಗ್ಗೆ 10 ಗಂಟೆಗೆ ಸ್ಥಳೀಯ ಕಾರೊಂದನ್ನು ಬಾಡಿಗೆ ಪಡೆದು ಇಂದ್ರಪುರ ಸೆಂಟ್ರಲ್ ದೆಹಲಿಯಿಂದ ಹೊರಟು, ಮಧ್ಯಾಹ್ನ 12.30ಕ್ಕೆ ಫಿರೋಜ್ ಷಾ ಕೋಟ್ಲಾ, ಅಂಬೇಡ್ಕರ್ ಕ್ರಿಕೆಟ್ ಮೈದಾನ ತಲುಪಿದ್ದರು. ಅಲ್ಲಿ ಕೋವಿಡ್-19 ಪರೀಕ್ಷೆಗಾಗಿ ಸಂಜೆ 6.30ರವರೆಗೂ ಕಾಯ್ದು, ನಂತರ ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಿದ್ದ ವಾಹನದ ಮೂಲಕ ಸಂಜೆ ಹಳೇ ದೆಹಲಿ ರೈಲ್ವೆ ನಿಲ್ದಾಣ ತಲುಪಿದ್ದರು. ಅಲ್ಲಿ ಇನ್ನೊಬ್ಬ ವ್ಯಕ್ತಿ ಇವರ ಜತೆಗೂಡಿದ್ದ. 7 ಜನರು 10 ರಾತ್ರಿ ಗಂಟೆಗೆ ಸೇವಾ ಶ್ರಮಿಕ ರೈಲಿನಲ್ಲಿ ಹೊರಟಿದ್ದರು.

ಮೇ 17ರಂದು ರಾತ್ರಿ 11.30 ಗಂಟೆಗೆ ಸೇವಾ ಶ್ರಮಿಕ್ ರೈಲು ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣ ತಲುಪಿದ್ದರು. ಧಾರವಾಡ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಬಸ್ ಮೂಲಕ ಮೂವರನ್ನು ಧಾರವಾಡಕ್ಕೆ ಕರೆತರಲಾಗಿತ್ತು. ಇಬ್ಬರನ್ನು ಹಾವೇರಿ ಜಿಲ್ಲೆಗೆ ಹಾಗೂ ಇಬ್ಬರನ್ನು ಬಳ್ಳಾರಿ ಜಿಲ್ಲೆಗೆ ಕಳುಹಿಸಲಾಗಿತ್ತು. ಅದೇ ದಿನ ಧಾರವಾಡ ಜಿಲ್ಲೆಯ ಮೂವರನ್ನು ಗಂಟಲ ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಮೇ 21ರಂದು ಇಬ್ಬರು ಯುವಕರು ಕರೊನಾ ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇವರನ್ನು ಸಂರ್ಪಸಿದ ಸಾರ್ವಜನಿಕರಿಗೆ ಕರೊನಾ ಸೋಂಕು ತಗಲುವ ಸಾಧ್ಯತೆ ಇದೆ. ಕಾರಣ ಅಂಥವರು ಕರೊನಾ ಸಹಾಯವಾಣಿ 1077ಗೆ ಸಂರ್ಪಸಿ ವಿವರ ನೀಡಬೇಕು. ಕೂಡಲೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಈಗಾಗಲೇ 9 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

290 ಶಂಕಿತರು ಪತ್ತೆ

ಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 290 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾ ವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಗುರುವಾರ ಇದ್ದ (ಒಟ್ಟು) 11,745 ನಿಗಾ ವಹಿಸಿದವರ ಸಂಖ್ಯೆ ಶುಕ್ರವಾರ 12,044ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 11376 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 10357 ಜನರ ವರದಿ ನೆಗೆಟಿವ್ ಬಂದಿವೆ. 33 ಪ್ರಕರಣಗಳಲ್ಲಿ ಪಾಸಿಟಿವ್ ಬಂದಿದ್ದು, 9 ಜನ ಗುಣಮುಖರಾಗಿದ್ದಾರೆ. ಇನ್ನೂ 995 ವರದಿ ಬರಬೇಕಿದೆ. ಗುರುವಾರ ಬಾಕಿ ಇದ್ದ 1269 ವರದಿಗಳ ಪೈಕಿ 274 ವರದಿಗಳು ನೆಗೆಟಿವ್ ಬಂದಿವೆ.

ಭಾನುವಾರ ನಿಷೇಧಾಜ್ಞೆ

ಕರೊನಾ ಹರಡುವಿಕೆ ತಡೆಗೆ ಮೇ 24ರಂದು ಸಿಆರ್​ಪಿಸಿ ಕಲಂ 144ರ ಅನ್ವಯ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಆದೇಶವು ಮೇ 23ರ ಸಂಜೆ 7ರಿಂದ ಮೇ 25ರ ಬೆಳಗ್ಗೆ 7ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಜಿಲ್ಲಾದ್ಯಂತ ವಾಹನ ಸಂಚಾರ ಸಂಪೂರ್ಣ ನಿಷೇಧವಾಗಿರುತ್ತದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿರಬೇಕು. ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಯಾವುದೇ ವಾಣಿಜ್ಯ ವಹಿವಾಟುಗಳಿಗೆ ಅವಕಾಶವಿಲ್ಲ. ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ ನಿಷೇಧಿಸಲಾಗಿದೆ. 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ, ಸಮಾರಂಭ ಜರುಗಿಸುವಂತಿಲ್ಲ. ಸಾರ್ವಜನಿಕರು ತುರ್ತು ವೈದ್ಯಕೀಯ ಕಾರ್ಯ ಹೊರತುಪಡಿಸಿ ಅನಗತ್ಯ ತಿರುಗಾಡುವುದನ್ನು ನಿರ್ಬಂಧಿಸಿದೆ. ಮದುವೆ ಕಾರ್ಯಕ್ರಮದಲ್ಲಿ ಕೇವಲ 50 ಜನ ಭಾಗವಹಿಸಲು ಅವಕಾಶವಿದೆ. ಶವಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶ. ಸರ್ಕಾರಿ ವಾಹನಗಳು ಮತ್ತು ಕೋವಿಡ್-19 ಕಾರ್ಯಾಚರಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಮತ್ತು ವಾಹನಗಳಿಗೆ ಆದೇಶ ಅನ್ವಯಿಸುವುದಿಲ್ಲ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

===============

ಗಂಟಲ ದ್ರವ ಸಂಗ್ರಹ ಕೇಂದ್ರ ಹೆಚ್ಚಳಕ್ಕೆ ಸೂಚನೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಬರುವ ದಿನಗಳಲ್ಲಿ ಕೋವಿಡ್ ತಪಾಸಣೆಯ ಪ್ರಮಾಣ ಹೆಚ್ಚಿಸಿ, ಪರೀಕ್ಷೆಗೊಳಪಡಿಸಲು ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೂಗು ಮತ್ತು ಗಂಟಲ ದ್ರವ ಸಂಗ್ರಹಣಾ ಕೇಂದ್ರಗಳನ್ನು ಹೆಚ್ಚಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.

ಶುಕ್ರವಾರ ಏರ್ಪಡಿಸಿದ್ದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೊರ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ಹೊರ ಜಿಲ್ಲೆಗಳಿಂದಲೂ ಮುಕ್ತ ಪ್ರವೇಶ ಅವಕಾಶ ಇದೆ. ಆದ್ದರಿಂದ ಕೆಮ್ಮು, ನೆಗಡಿ, ಜ್ವರ, ತೀವ್ರ ಉಸಿರಾಟದ ತೊಂದರೆಗಳ ಲಕ್ಷಣಗಳಿರುವ ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಬೇಕು. ಸದ್ಯ ಜಿಲ್ಲೆಯಲ್ಲಿ ಮೊಬೈಲ್ ಸ್ವಾ್ಯಬ್ ಸಂಗ್ರಹಣಾ ಕೇಂದ್ರ ಸೇರಿ 11 ಘಟಕಗಳಿವೆ. ಇವುಗಳ ಸಂಖ್ಯೆ ಕನಿಷ್ಠ 20ಕ್ಕೆ ಏರಿಕೆಯಾಗಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ನಗರ ಆರೋಗ್ಯ ಕೇಂದ್ರಗಳು ಮತ್ತು ಗ್ರಾಮೀಣ ಭಾಗದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಗುರುತಿಸಿ, ಅಗತ್ಯ ಉಪಕರಣಗಳನ್ನು ಒದಗಿಸಬೇಕು ಎಂದರು.

ಕೈಗಾರಿಕೆಗಳ ಪುನರಾರಂಭಕ್ಕೆ ಸಹಕಾರ

ಧಾರವಾಡ: ಕೋವಿಡ್-19 ಕರೊನಾ ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮ ಹಾಗೂ ಲಾಕ್​ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿರುವ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ಪುನರಾರಂಭ ಮಾಡಲು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಜಿಲ್ಲೆಯ ಕೈಗಾರಿಕೊದ್ಯಮಗಳ ಸಭೆಯಲ್ಲಿ ಅವರು ಮಾತನಾಡಿದರು.

ಶೇ. 33ರಷ್ಟು ಕಾರ್ವಿುಕರನ್ನು ಬಳಸಿಕೊಂಡು ಲಾಕ್​ಡೌನ್ ನಿಯಮಗಳನ್ನು ಪಾಲಿಸಲು ನಿರ್ದೇಶಿಸಿದೆ. ಅದರಂತೆ ಹೆಚ್ಚುವರಿಯಾಗಿ ಸರತಿ ಆಧಾರದಲ್ಲಿ ಕಾರ್ವಿುಕರನ್ನು ಬಳಸಿಕೊಂಡು ಕೈಗಾರಿಕೆ ಆರಂಭಿಸಬಹುದು. ಜಿಲ್ಲೆಯಿಂದ ವಿವಿಧ ರಾಜ್ಯಗಳಿಗೆ ಇಲ್ಲಿಯವರೆಗೆ ಅಂದಾಜು 7,000 ಕಾರ್ವಿುಕರು ಮರಳಿ ಹೋಗಿದ್ದಾರೆ. ಇದರಿಂದಾಗಿ ಕಾರ್ವಿುಕರ ಕೊರತೆ ಆಗಿದೆ. ಸಾಲ ಮತ್ತು ಬಡ್ಡಿ ಮರುಪಾವತಿಗೆ ಕಾಲಾವಕಾಶ ಹಾಗೂ ದುಡಿಯುವ ಬಂಡವಾಳಕ್ಕೆ ಹೆಚ್ಚಿನ ಆರ್ಥಿಕ ನೆರವು ಸೇರಿದಂತೆ ಕೈಗಾರಿಕೋದ್ಯಮಿಗಳ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಹುಬ್ಬಳ್ಳಿ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಹೇಂದ್ರ ಲದ್ದಡ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳು ಶೀಘ್ರವಾಗಿ ಪುನಃಶ್ಚೇತನಗೊಳ್ಳಲು ನೆರವು ನೀಡಿದ ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ತಿಳಿಸಿದರು.

ಕರ್ನಾಟಕ ರಾಜ್ಯ ಹಣಕಾಸು ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಅನ್ನಪೂರ್ಣ ಕೊಪ್ಪದ, ಲೀಡ್ ಬ್ಯಾಂಕ್ ಮುಖ್ಯ ಮ್ಯಾನೇಜರ್ ಕೆ. ಈಶ್ವರನಾಥ, ಕೆಐಎಡಿಬಿಯ ಅಭಿವೃದ್ಧಿ ಅಧಿಕಾರಿ ಮನೋಹರ ವಡ್ಡರ, ಬೇಲೂರು ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀಕಾಂತ ಥಿಟೆ, ಕೈಗಾರಿಕೋದ್ಯಮಿ ನಿಂಗಣ್ಣ ಬಿರಾದಾರ, ಸತ್ತೂರು ಕೈಗಾರಿಕಾ ಸಂಘದ ಅಧ್ಯಕ್ಷ ಆರ್.ಜಿ. ಭಟ್, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಎ.ಜಿ.ಎಂ. ದಿನೇಶ ಜವಳಿ ಹಾಗೂ ಇತರ ಕೈಗಾರಿಕೋದ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ ಜಿಲ್ಲೆಯ ಕೈಗಾರಿಕೆಗಳ ಪ್ರಸ್ತುತ ಕಾರ್ಯ ನಿರ್ವಹಣೆ ಹಾಗೂ ಸರ್ಕಾರ ಕಲ್ಪಿಸಿರುವ ಅನುಕೂಲತೆಗಳನ್ನು ವಿವರಿಸಿದರು.

ಬೆಂಗಳೂರಿನಲ್ಲೇ ಸುತ್ತಾಡುತ್ತಿರುವ ಸೋಂಕಿತ ಚಾಲಕ

ಹಾವೇರಿ: ಪಾಸಿಟಿವ್ ವರದಿ ಬಂದಿರುವ ಬಂಕಾಪುರದ (ಪಿ-1691) ವ್ಯಕ್ತಿ ಬೆಳಗ್ಗೆಯಿಂದ ಸಂಜೆಯವರೆಗೂ ಬೆಂಗಳೂರು ಮಾರುಕಟ್ಟೆಯಲ್ಲಿ ಕಾಲ ಕಳೆದಿದ್ದಾನೆ.

ಪಿ-1691 ವ್ಯಕ್ತಿ ಚಾಲಕನಾಗಿದ್ದು, ಮೇ 5ರಿಂದ 12ರೊಳಗೆ 3 ಬಾರಿ ಮುಂಬೈಗೆ ಮೆಣಸಿನಕಾಯಿ ಲೋಡ್ ತೆಗೆದುಕೊಂಡು ಹೋಗಿ ಬಂದಿದ್ದ. ಇದನ್ನು ಅಧಿಕಾರಿಗಳಿಗೆ ತಿಳಿಸಿದ್ದ. ಹೀಗಾಗಿ ಶಿಗ್ಗಾಂವಿ ತಾಲೂಕಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸ್ವ್ಯಾಬ್ ವರದಿ ಬರುವ ಮುನ್ನವೇ ಈತ ಮತ್ತೆ ಗುರುವಾರ ಹಾನಗಲ್ಲ ತಾಲೂಕಿನ ಗ್ರಾಮವೊಂದರಿಂದ ಮೇ 21ರಂದು ಅನಾನಸ್ ಲೋಡ್ ಮಾಡಿಕೊಂಡು ಬೆಂಗಳೂರಿಗೆ ತೆರಳಿದ್ದಾನೆ. ಶುಕ್ರವಾರ ಈತನಿಗೆ ಕರೊನಾ ಪಾಸಿಟಿವ್ ವರದಿ ಬರುತ್ತಿದ್ದಂತೆಯೇ ಅಧಿಕಾರಿಗಳು ಕ್ವಾರಂಟೈನ್ ಮಾಡಲು ಮುಂದಾದರು. ಆತನ ಪತ್ತೆಗೆ ಮುಂದಾದಾಗ ಬೆಂಗಳೂರಿಗೆ ಹೋಗಿರುವ ವಿಷಯ ಗೊತ್ತಾಗಿದೆ. ಈ ಕುರಿತು ಬೆಂಗಳೂರಿಗೆ ಮಾಹಿತಿ ನೀಡಿ ಆತನನ್ನು ಅಲ್ಲಿಯೇ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸುವ ಬದಲು ಅಲ್ಲಿಂದ ಆತನನ್ನು ಕರೆತರಲು ಅಧಿಕಾರಿಗಳ ತಂಡ ಕಳುಹಿಸಲಾಗಿದೆ. ಸಂಜೆ 5ರವರೆಗೂ ಸೋಂಕಿತ ವ್ಯಕ್ತಿ ಬೆಂಗಳೂರು ಮಾರುಕಟ್ಟೆಯಲ್ಲಿದ್ದು, ಅಲ್ಲಿ ಯಾರ್ಯಾರೊಂದಿಗೆ ಸಂಪರ್ಕಕ್ಕೆ ಬಂದಿದ್ದಾನೆ ಎಂಬುದು ತಿಳಿಯದು.

ಪಿ-1691 ಸೋಂಕಿತ ಮೇ 19ರಂದು ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷೆಗಾಗಿ ಗಂಟಲ ದ್ರವ ಕೊಟ್ಟು ಹೋಗಿದ್ದ. ಸ್ವಯಂ ಆಗಿ ಬಂದು ತಪಾಸಣೆ ಮಾಡಿಕೊಂಡರೆ ಅವರನ್ನು ಕ್ವಾರಂಟೈನ್ ಮಾಡುವುದಿಲ್ಲ. ಮಾದರಿ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದೆ. ಇದರ ಬಗ್ಗೆ ಅರಿವಿಲ್ಲದ ಆತ ಬೆಂಗಳೂರಿಗೆ ಹೋಗಿದ್ದು ಹಾವೇರಿಗೆ ಕರೆತರಲಾಗುತ್ತಿದೆ.

| ಎಂ. ಯೋಗೇಶ್ವರ ಅಪರ ಜಿಲ್ಲಾಧಿಕಾರಿ

=========

ಉದಾರವಾದಿ ಕಥಾ ಪರಂಪರೆ ಮುಂದುವರಿಸಿದ್ದ ಶಾಂತಾದೇವಿ

ಕನ್ನಡದ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ಅವರ ಬಾಳ ಸಂಗಾತಿ ಶಾಂತಾದೇವಿ ಕಣವಿ ಅವರು ನಿಧನರಾದದ್ದು ಕನ್ನಡಲೋಕಕ್ಕೆ ಅಪಾರ ದುಃಖವಾಗಿದೆ. ಶಾಂತಾದೇವಿ ಕಣವಿ ಅವರು ಖ್ಯಾತ ಕಥೆಗಾರ್ತಿಯಾಗಿದ್ದು, ಕಳೆದ ಅರ್ಧ ಶತಮಾನದಿಂದ ಬರೆಯುತ್ತಿದ್ದರು.

ಸಂಜೆ ಮಲ್ಲಿಗೆ (1958), ಬಯಲು ಆಲಯ (1973), ಮರು ವಿಚಾರ (1978), ಜಾತ್ರೆ ಮುಗಿದಿತ್ತು (1981), ಕಳಚಿಬಿದ್ದ ಪೈಜಣ (1983), ನೀಲಿಮಾ ತೀರ (1992), ಗಾಂಧಿ ಮಗಳು (1997) ಕಥಾ ಸಂಕಲನಗಳು ಪ್ರಕಟವಾಗಿವೆ. ಶಾಂತಾದೇವಿ ಕಣವಿ ಅವರ ಕಥಾಮಂಜರಿ ಸಮಗ್ರ ಕಥೆಗಳ 2 ಸಂಪುಟಗಳನ್ನು ಬೆಂಗಳೂರಿನ ಪ್ರಿಯದರ್ಶಿನಿ ಪ್ರಕಾಶನ ಪ್ರಕಟಿಸಿದೆ.

ಕನ್ನಡದಲ್ಲಿ ಮಹಿಳೆಯರು ಸಾಹಿತ್ಯ ರಚನೆಗೆ ಹೆಚ್ಚಾಗಿ ತೊಡಗಿಕೊಳ್ಳದಿದ್ದ ಕಾಲದಲ್ಲಿ ಬರವಣಿಗೆ ಆರಂಭಿಸಿದ ಶಾಂತಾದೇವಿ ಕಣವಿ ಅವರು 1958ರಲ್ಲಿ ತಮ್ಮ ಮೊದಲ ಕಥೆ ‘ಸ್ವರೂಪ ದರ್ಶನ’ ಪ್ರಕಟಿಸಿದರು. ಕಥೆಗಳಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಜೀವನದ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಮಾಸ್ತಿ ಪರಂಪರೆಯ ಉದಾರವಾದಿ ಕಥನ ಪರಂಪರೆಯನ್ನು ಶಾಂತಾದೇವಿ ಕಣವಿ ಅವರು ತಮ್ಮ ಕಥೆಗಳಲ್ಲಿ ಮುನ್ನಡೆಸಿದ್ದಾರೆ. ಅವರು ಬರೆಯಲು ಆರಂಭಿಸಿದಾಗ ನವ್ಯತೆ ಬಂದಿದ್ದರೂ, ಕೌಟುಂಬಿಕ ಜೀವನದ ಬದುಕನ್ನು ಮಾನವತಾವಾದಿ ನೆಲೆಯಲ್ಲಿ ಚಿತ್ರಿಸಿದ್ದಾರೆ.

ಚೆನ್ನವೀರ ಕಣವಿ ಹಾಗೂ ಶಾಂತಾದೇವಿ ಕಣವಿಯವರದ್ದು ಪ್ರೇಮ ವಿವಾಹ. ಕಣವಿಯವರ ಕವಿತಾ ಸಂಕಲನ ಕಾವ್ಯಾಕ್ಷಿಯ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಶಾಂತಾದೇವಿ ಹಾಡುತ್ತಿದ್ದರು. ಅವರಿಬ್ಬರ ನಡುವೆ ಪತ್ರ ವ್ಯವಹಾರ ಆಯಿತು. ಪರಸ್ಪರ ಪ್ರೀತಿಯಿಂದ ಒಪ್ಪಿಕೊಂಡು 1952ರಿಂದ ಇಂದಿನವರೆಗೆ ಅನ್ಯೋನ್ಯ ದಾಂಪತ್ಯ ಜೀವನ ನಡೆಸಿದ್ದಾರೆ.

ಚೆನ್ನವೀರ ಕಣವಿ ಅವರು ಕನ್ನಡ ಕಾವ್ಯ ಲೋಕದಲ್ಲಿ ಅನನ್ಯ ಸಾಧನೆ ಮಾಡಿದರೆ, ಶಾಂತಾದೇವಿ ಅವರು ಮಹಿಳಾ ಕಥಾ ಸಾಹಿತ್ಯದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಎಲ್ಲರೂ ಸ್ತ್ರೀವಾದಿ ಚಿಂತನೆ ಬಗೆಗೆ ಮಾತನಾಡಿದರೆ, ಶಾಂತಾದೇವಿ ಅವರು ಸ್ತ್ರೀ ಪುರುಷ ಸಮಾನತೆ, ಸಮನ್ವಯ, ಸಮತೋಲನದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅವರು ಈ ಬಗ್ಗೆ ಹೇಳಿದ ವಿಚಾರಗಳಿವು; ಸ್ತ್ರೀವಾದಿ ಚಿಂತಕರಲ್ಲಿ ಉಗ್ರವಾದಿಗಳೂ ಸೌಮ್ಯವಾದಿಗಳೂ ಇದ್ದಾರೆ. ಸ್ತ್ರೀಯ ಅಭಿವ್ಯಕ್ತಿ ಸ್ವಾತಂತ್ರ್ಯ ಸರಿಯೇ. ಸ್ತ್ರೀ ಪುರುಷ ಭೇದ ಕುಟುಂಬ ವ್ಯವಸ್ಥೆಯನ್ನೂ, ಸಮಾಜ ವ್ಯವಸ್ಥೆಯನ್ನೂ ಒಡೆಯಲು ದಾರಿ ಮಾಡಿಕೊಡುತ್ತದೆ. ಮಹಿಳೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಆದರೆ ಸ್ವಾತಂತ್ರ್ಯ ಹೆಸರಿನಲ್ಲಿ ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ. ಈ ವಿವೇಕ ಸ್ತ್ರೀವಾದಿ ಚಿಂತಕರಲ್ಲಿ ಅವಶ್ಯಕವಾಗಿ ಇರಬೇಕು. ಬದುಕು ಹಾಗೂ ಸಾಹಿತ್ಯದಲ್ಲಿ ಸ್ತ್ರೀ, ಪುರುಷ ಸಂಬಂಧಗಳ ಅನ್ಯೋನ್ಯತೆಯನ್ನು ಕಣವಿ ದಂಪತಿ ಅನುಸರಿಸುವ ಮೂಲಕ ಕನ್ನಡ ಸಾಹಿತಿ ದಂಪತಿಗಳಲ್ಲಿ ಮಾದರಿ ಹಾಕಿ ಕೊಟ್ಟಿದ್ದಾರೆ.

ಶಾಂತಾದೇವಿ ಕಣವಿ ಅವರು ವಿಜ್ಞಾನಿ ಶಿವಾನಂದ ಕಣವಿ, ಕ್ರಿಕೆಟ್ ವೀಕ್ಷಕ ವಿವರಣೆಕಾರ ಚಂದ್ರಮೌಳಿ ಕಣವಿ, ತಂತ್ರ ವಿಜ್ಞಾನಿ ಪ್ರಿಯದರ್ಶಿನಿ ಕಣವಿ, ಕರುಣಪ್ರಸಾದ ಕಣವಿ ಅವರ ತಾಯಿ. ಅವರ ಒಬ್ಬಳೇ ಮಗಳು ರಂಜನಾ ಬೆಳಗಾವಿಯ ಡಾ. ಅಶೋಕ ಗೋಧಿ ಅವರನ್ನು ವಿವಾಹವಾಗಿದ್ದು, ಪ್ರಾಧ್ಯಾಪಕಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಪ್ರತಿಭಾವಂತ ಮಕ್ಕಳನ್ನು ಪಡೆದ ಶಾಂತಾದೇವಿ ಕಣವಿ ಅವರು ಆದರ್ಶ ಗೃಹಿಣಿಯಾಗಿದ್ದರು. ಸ್ನೇಹ, ಪ್ರೀತಿ, ಮಾನವೀಯ ಅಂತಃಕರಣಗಳ ನಾಡಿನ ಅಪರೂಪದ ಲೇಖಕಿಯಾಗಿದ್ದಾರೆ.

| ಜಿ.ಎಂ. ಹೆಗಡೆ ಸಾಹಿತಿ

===========

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net