ಸರ್ಕಾರಕ್ಕೆ ಬೆಳೆ ನಷ್ಟದ ನಿಖರ ವರದಿ ಸಲ್ಲಿಸಿ

Minister
Published on

ಚಿತ್ರದುರ್ಗ: ಜಿಲ್ಲಾದ್ಯಂತ ಮಳೆಯಿಂದಾಗಿ ಬೆಳೆ, ಜನ, ಜಾನುವಾರು, ಮನೆಗಳು ಸೇರಿ ಎಷ್ಟು ಹಾನಿ ಉಂಟಾಗಿದೆ ಎಂಬ ನಿಖರ ಮಾಹಿತಿಯನ್ನು ಸ್ಥಳ ಪರಿಶೀಲಿಸಿಯೇ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಜಿಲ್ಲಾಧಿಕಾರಿಗೆ ಸೂಚಿಸಿದರು.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಬೆಳೆ ಹಾನಿಯಾದ ಕೆಲ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಜನರಿಗೆ ಒಳಿತಾಗಲಿ ಎಂಬ ಕಾರಣಕ್ಕೆ ಪರಿಶೀಲಿಸದೆ, ವರದಿ ನೀಡಿದರೆ, ಯಾರು ಬೇಕಾದರೂ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಆದ್ದರಿಂದ ನೈಜ ಚಿತ್ರಣ ಸರ್ಕಾರದ ಕೈಸೇರಲಿ ಎಂದು ಹೇಳಿದರು.

ದಾವಣಗೆರೆ, ಚಿತ್ರದುರ್ಗ, ವಿಜಯನಗರ, ತುಮಕೂರು ಸೇರಿ ಮಧ್ಯಕರ್ನಾಟಕ ಭಾಗದಲ್ಲೂ ಈ ಬಾರಿ ಹೆಚ್ಚಿನ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ಟೋಬರ್‌ನ ಈವರೆಗೂ 170 ಮಿ.ಮೀ. ಆಗಿದ್ದು, ವಾಡಿಕೆೆಗಿಂತ 65 ಮಿ.ಮೀ ಅಧಿಕವಾಗಿದೆ. ಹೀಗಾಗಿ ಬಹಳಷ್ಟು ಕಡೆ ಬೆಳೆ ಹಾನಿ ಉಂಟಾಗಿದೆ. ಈ ಜಿಲ್ಲೆಯಲ್ಲಿ ಪರಿಹಾರ ಸಂಬಂಧ 15.50 ಕೋಟಿ ರೂ. ಅನುದಾನ ಜಿಲ್ಲಾಧಿಕಾರಿ ಬಳಿ ಇದೆ ಎಂದು ತಿಳಿಸಿದರು.

ಮುಂಗಾರು ವೇಳೆ ಬೆಳೆ ಹಾಗೂ ಮನೆ ಹಾನಿ ಪರಿಹಾರ ಸಂಬಂಧ 100 ಕೋಟಿ ರೂ. ನೀಡಲಾಗಿದ್ದು, ಉಳಿದ 100 ಕೋಟಿ ರೂ. ವಿತರಣಾ ಕಾರ್ಯವೂ ಚಾಲ್ತಿಯಲ್ಲಿದೆ ಎಂದರು.

ಸಾಕಷ್ಟು ಅಭಿವೃದ್ಧಿ ಕಾರ್ಯ ರಾಜ್ಯದಲ್ಲಿ ಆಗಬೇಕಿದೆ. ಇನ್ನೂ ಮೂರೂವರೆ ವರ್ಷದೊಳಗೆ ಆ ನಿಟ್ಟಿನಲ್ಲೂ ಸಿಎಂ ಗಮನ ಹರಿಸಲಿದ್ದಾರೆ. ಜನರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿ, ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.

ಭದ್ರಾಗೆ ಅನುದಾನ ಕೊಡಿಸಿ: ಮಧ್ಯಕರ್ನಾಟಕ ಪದೇಪದೆ ಬರಗಾಲಕ್ಕೆ ತುತ್ತಾಗುತ್ತಿದೆ. ಭದ್ರಾದಲ್ಲಿ ಹೆಚ್ಚಿನ ನೀರು ಲಭ್ಯವಿದೆ. ಹೀಗಾಗಿ ಈ ಭಾಗದ ರೈತರು ಭದ್ರಾ ಮೇಲ್ದಂಡೆ ಯೋಜನೆಗೆ ವೇಗ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ 5,300 ಕೋಟಿ ರೂ. ಅನುದಾನ ಬರಬೇಕಿದೆ. ಆದರೆ, ಈವರೆಗೂ 53 ಪೈಸೆಯೂ ನೀಡಿಲ್ಲ. ಬಿ.ವೈ.ವಿಜಯೇಂದ್ರ ಅವರು ಮನಸ್ಸು ಮಾಡಿ ಕೇಂದ್ರದಿಂದ ಅನುದಾನ ತರಲಿ ಎಂದು ಒತ್ತಾಯಿಸಿದರು.

ನೈಸರ್ಗಿಕ ವಿಕೋಪಗಳ ಪರಿಹಾರ ವಿತರಣೆ ಮಾರ್ಗಸೂಚಿ ಬದಲಿಸಿ, ಬೆಳೆ ಪರಿಹಾರ ಮೊತ್ತ ಹೆಚ್ಚಳಕ್ಕೂ ರಾಜ್ಯ ಸರ್ಕಾರದಿಂದಲೂ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.

ಭೇಟಿ, ಪರಿಶೀಲನೆ: ಬೆಳೆ ಹಾನಿಯಾಗಿರುವ ಚಿತ್ರದುರ್ಗ ತಾಲೂಕಿನ ಬೆಳಘಟ್ಟ, ಕಾಸವರಹಟ್ಟಿ, ಕೆ. ಬಳ್ಳೇಕಟ್ಟೆ, ಸಾದರಹಳ್ಳಿ ಸೇರಿ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ, ಹಾನಿಯಾಗಿರುವ ಬೆಳೆ ಪರಿಶೀಲಿಸಿ, ಮಾಹಿತಿ ಪಡೆದರು. ಬೆಳಘಟ್ಟ ಗ್ರಾಮದ ಸುಜಾತಾ ಭಾರ್ಗವರೆಡ್ಡಿ ಅವರ ಜಮೀನಿನಲ್ಲಿ ಹಾನಿಯಾದ ಈರುಳ್ಳಿ ಬೆಳೆ ವೀಕ್ಷಿಸಿದರು. ನಂತರ ಹಾಯ್ಕಲ್‌ನಲ್ಲಿ ಮೆಕ್ಕೆಜೋಳ, ಸಾದರಹಳ್ಳಿಯಲ್ಲಿ ಕೆರೆ ಕೋಡಿ ಬಿದ್ದು, ಬೆಳೆ ಹಾನಿಯಾಗಿರುವುದನ್ನು ವೀಕ್ಷಿಸಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಆರ್.ಕಾರ್ತಿಕ್, ತಹಸೀಲ್ದಾರ್ ಡಾ.ನಾಗವೇಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಪ್ಪ ಬೋಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net