

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಪಂ ವ್ಯಾಪ್ತಿಯ ಏಳು ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಸಂಬಂಧ ಜಿಪಿಎಸ್ ಮಾಡುವಾಗ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಅಲ್ಲದೆ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿರೋಧಿಸಿ ರಾಜ್ಯ ರೈತಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಸಮಸ್ಯೆ ಇತ್ಯರ್ಥಪಡಿಸಿ ರೈತರಿಗೆ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ನ್ಯಾಯ ದೊರಕಿಸಿಕೊಡಿ ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ರವಾನಿಸಿದರು.
ಚಿಕ್ಕಮಧುರೆ, ಹಿರೇಮಧುರೆ, ಉಪ್ಪಾರಹಟ್ಟಿ, ಚಿಗತನಹಳ್ಳಿ, ಗಂಜಿಗುಂಟೆ, ಲಂಬಾಣಿಹಟ್ಟಿ, ಕನ್ನೇನಹಳ್ಳಿ ಗ್ರಾಮಗಳ ರೈತರು ತೊಗರಿ ಮತ್ತು ಶೇಂಗಾಕ್ಕೆ ಬೆಳೆವಿಮೆ ಮೊತ್ತ ಪಾವತಿಸಿದ್ದರೂ ಮಳೆ ಸುರಿದು ಬೆಳೆ ಸಮೃದ್ಧವಾಗಿದೆ ಎಂಬ ಅಧಿಕಾರಿಗಳ ಸಮೀಕ್ಷೆಯಿಂದಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆವಿಮೆ ಜಮಾ ಆಗಿಲ್ಲ ಎಂದು ದೂರಿದರು.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ರೈತರು ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಬೆಳೆ ಹಾನಿಯಿಂದ ಕೈ ಸುಟ್ಟುಕೊಂಡಿದ್ದಾರೆ. ತಾಲೂಕಿನ ಎಲ್ಲ ಪಂಚಾಯಿತಿಗಳಿಗೂ ವಿಮಾ ಪರಿಹಾರ ಜಮಾ ಆಗಿದ್ದು, ಸೋಮಗುದ್ದು ಗ್ರಾಪಂನ ರೈತರಿಗೆ ದೊರೆತಿಲ್ಲ. ಆದ್ದರಿಂದ ಒಂದು ವಾರದೊಳಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಕರೆಸಿ, ವಿಮಾ ಪರಿಹಾರ ಜಮಾಕ್ಕೆ ಕ್ರಮವಹಿಸಿ ಎಂದು ಕೋರಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಪ್ರಶಾಂತ, ಕೆಂಚಪ್ಪ, ತಿಪ್ಪೇಸ್ವಾಮಿ, ಎಸ್.ನಾಗರಾಜ, ಶಶಿಧರ್, ಬಿ.ಟಿ.ಚಿದಾನಂದ, ಬಿ.ಶಿವಣ್ಣ ಇತರರಿದ್ದರು.