

ಮೈಸೂರು: ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರ್ಕಾರ ಹೋದರೆ ಜನರಿಗೆ ನೆಮ್ಮದಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.
ಸಿಎಂ ಸ್ಥಾನ ಇರುವುದೇ ದಾಖಲೆ ಮುರಿಯಲು ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ದಾಖಲೆ ಮಾಡುವುದು ರಾಜ್ಯವನ್ನು ಎಷ್ಟು ದಿನ ಆಳಿದ್ದೇವೆ ಎಂಬುದರ ಮೇಲಲ್ಲ. ನಾಡಿನ ಜನರಿಗೆ ಏನು ಕೊಟ್ಟಿದ್ದೇವೆ, ಎಷ್ಟು ಸಮಸ್ಯೆ ಬಗೆಹರಿಸಿದ್ದೇವೆ ಎಂಬುದು ಮುಖ್ಯ. ಎಷ್ಟು ವರ್ಷ ಅಧಿಕಾರದಲ್ಲಿದ್ದೆವು ಎಂಬುದು ಮುಖ್ಯವಾಗಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕುಟುಕಿದರು.
ಬಹುಮತ ಪಡೆದ ಸರ್ಕಾರ ಇದು. 6 ತಿಂಗಳೋ ಅಥವಾ 5 ವರ್ಷವೋ ಎಷ್ಟು ದಿನ ಇರುತ್ತಾರೆಯೋ ಇರಲಿ. ಮುಂದೆಯೂ ಯಾರಾರು ಇರುತ್ತಾರೆ ಎಂಬುದು ಚುನಾವಣೆ ನಡೆದಾಗ ತಿಳಿಯುತ್ತದೆ ಎಂದರು.
ರಾಜೀನಾಮೆ ನೀಡುವ ಮಾತಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ರಾಜಕೀಯ ವೈರಾಗ್ಯ ಬಂದಂತಿದೆ. ಮರ್ಯಾದಸ್ಥರು ಈ ಸರ್ಕಾರದಲ್ಲಿ ಇರುವುದು ಒಳ್ಳೆಯದಲ್ಲ ಎಂಬ ತೀರ್ಮಾನಕ್ಕೆ ಅವರು ಬಂದಿರಬೇಕು. ಹೀಗೆ ನಿತ್ಯ ಹೇಳಿಕೆ ನೀಡುತ್ತಿರುವ ಸಚಿವರಿಗೆ ನಿಯಂತ್ರಣ ಇದೆಯಾ? ಜನರು ಹಾಗೂ ಅಧಿಕಾರಿಗಳಿಗೆ ಏನು ಸಂದೇಶ ಕೊಡುತ್ತೀದ್ದೀರಿ? ಎಂದು ಕಿಡಿಕಾರಿದರು.
ಜಾತಿ ಗಣತಿ ವರದಿ ಇಟ್ಕೊಂಡು ಪೂಜೆ ಮಾಡುತ್ತಿದ್ದೀರಾ? ಬಿಡುಗಡೆ ಮಾಡದಂತೆ ನಿಮ್ಮನ್ನು ಹಿಡಿದುಕೊಂಡಿರುವವರು ಯಾರು? ಎಂದು ಎಚ್‌ಡಿಕೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಸಮೀಕ್ಷೆ ನಡೆದು 10 ವರ್ಷವಾಗಿದೆ. ಬಳಿಕ ಅನೇಕ ಬದಲಾವಣೆಗಳಾಗಿವೆ. ವೈಜ್ಞಾನಿಕವಾಗಿ ಮಾಡಬೇಕಾಗಿತ್ತು. ಗಣತಿದಾರರು ನಮ್ಮ ಮನೆಗೇ ಬಂದಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ವಾಸ್ತವ ಹೀಗಿರುವಾಗ, ಈ ವರದಿ ಇಟ್ಟುಕೊಂಡು ಈಗ ಅಲ್ಲಾಡಿಸುತ್ತೀರಾ? ರಾಜಕೀಯಕ್ಕಾಗಿ, ವೈಯಕ್ತಿಕ ಆಸೆಗಾಗಿ ಸಮಾಜವನ್ನು ಒಡೆಯುತ್ತಿದ್ದೀರಾ ಎಂದು ಹರಿಹಾಯ್ದರು.
ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿದ ನಿವೇಶನ ಹಾಗೂ ಮನೆಗಳಿಗೆ ಬಿ-ಖಾತಾ ನೀಡುವುದನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಮಾಡುತ್ತಿರುವುದು ಏಕೆ? ಖಜಾನೆಯಲ್ಲಿ ಹಣವಿಲ್ಲದಿದ್ದರಿಂದ ಈಗ ಅಕ್ರಮ-ಸಕ್ರಮ ಎಂದು ಹೊರಟಿದ್ದಾರೆ. ಈ ವಿಷಯದಲ್ಲಿ ಕೋರ್ಟ್‌ಗಳಲ್ಲಿ ಅನೇಕ ವ್ಯಾಜ್ಯಗಳಿವೆ. ಇನ್ನೂ ಸ್ಪಷ್ಟತೆ ಇಲ್ಲ. ಆದಾಗ್ಯೂ, ಖಜಾನೆಯನ್ನು ತುಂಬಿಸಿಕೊಳ್ಳಲು ಆತುರದಲ್ಲಿದೆ. ತೆರಿಗೆ ಹೇರಿಕೆ ಮತ್ತು ದರ ಏರಿಕೆಯಿಂದಲೇ ಈ ಸರ್ಕಾರ ನಡೆಯುತ್ತಿದೆ ಎಂದು ಗುಡುಗಿದರು.