

ಬಾಗಲಕೋಟೆ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಹಂಚಿಕೆ ಮಾಡಿದ ಭೂಮಿಯನ್ನು ಕೈಗಾರಿಕೆಳಿಗೆ ಬಳಸಿಕೊಳ್ಳಲಾಗಿದೆಯೇ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008 ರಿಂದ ರಾಜ್ಯದಲ್ಲಿ ಕೈಗಾರಿಕೆಗಾಗಿ ಲ್ಯಾಂಡ್ ಬ್ಯಾಂಕ್ ಆರಂಭಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಕೈಗಾರಿಕೆಗೆ ಹಂಚಿದ ಭೂಮಿ ಯಾವುದಕ್ಕೆ ಬಳಕೆಯಾಗಿದೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಅಗ್ರಹಿಸಿದರು.
ಭೂಮಿ ಪಡೆದ 5 ವರ್ಷಗಳಲ್ಲಿ ಕೈಗಾರಿಕೆ ಸ್ಥಾಪಿಸದಿದ್ದರೆ ಭೂಮಿ ವಾಪಸ್ ಪಡೆಯಬೇಕು ಎಂದಿದೆ. ಎಷ್ಟು ವಾಪಸ್ ಪಡೆಯಲಾಗಿದೆ ಎಂದು ಪ್ರಶ್ನಿಸಿದರು.
ನಾಲ್ಕು ತಿಂಗಳ ಹಿಂದೆ ಬಾದಾಮಿ ತಾಲ್ಲೂಕಿನ ಹಲಕುರ್ಕಿಯಲ್ಲಿ ಕಾಲುವೆ ನಿರ್ಮಾಣಕ್ಕೆ ನೋಟಿಸ್ ನೀಡಿದ ಭೂಮಿಯನ್ನು ಈಗ ಕೈಗಾರಿಕೆಗೆ ವಶ ಪಡಿಸಿಕೊಳ್ಳಲು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮುಂದಾಗಿದ್ದಾರೆ. ಇವರಿಗೆ ಹೇಳುವವರು, ಕೇಳುವವರು ಯಾರು ಇಲ್ಲವೇ ಎಂದು ಪ್ರಶ್ನಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್‌ಗೆ ಆಗ್ರಹಿಸಿ ನವೆಂಬರ್ ನಲ್ಲಿ ಬಸವ ಕಲ್ಯಾಣದಿಂದ ಬೆಂಗಳೂರುವರೆಗೆ ಪರಿವರ್ತನಾ ಯಾತ್ರೆ ಮಾಡಲಾಗುವುದು ಎಂದರು.
ಪುಲಕೇಶ ಬ್ಯಾಂಕ್ ಎದುರು ಧರಣಿ: ಬಾದಾಮಿಯ ವೀರಪುಲಕೇಶಿ ಸಹಕಾರಿ ಬ್ಯಾಂಕ್ ವ್ಯವಹಾರದ ಬಗ್ಗೆ ಉನ್ನತಮಟ್ಟದ ತನಿಖೆಗೆ ಆಗ್ರಹಿಸಿ ಸೋಮವಾರದಿಂದ ಬ್ಯಾಂಕ್ ಮುಂದೆ ಅಹೋರಾತ್ರಿ ಧರಣಿ ಮಾಡಲಾಗುವುದು. ನಿತ್ಯ 10 ಜನ ರೈತರು ದಿನದ 24 ಗಂಟೆ ಮೌನ ಹೋರಾಟ ಮಾಡಲಿದ್ದಾರೆ ಎಂದರು.
ಹರಾಜು ಮಾಡಿದ ರೈತರ ಭೂಮಿ ಯಾರಿಗೆ ಹೋಗಿದೆ, ಇಲ್ಲಿಯವರೆಗಿನ ವಹಿವಾಟು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ರೈತರ ಭೂಮಿ ಹರಾಜು ಮಾಡುತ್ತಿರುವ ವಿಷಯವನ್ನು ಸಹಕಾರ ಸಚಿವ ಸೋಮಶೇಖರ ಅವರ ಗಮನಕ್ಕೆ ತಂದಿದ್ದೆವು. ಅವರು, ಬ್ಯಾಂಕನವರಿಗೆ ಒನ್ ಟೈಮ್ ಸೆಟಲ್ ಮೆಂಟ್ ಗೆ ಪ್ರಸ್ತಾವ ಕಳುಹಿಸುವಂತೆ ಸೂಚಿಸಿದ್ದರು. ಇಲ್ಲಿಯವರೆಗೆ ಕಳುಹಿಸಿಲ್ಲ. ನಿಮ್ಮ ಪಕ್ಷದವರೇ ಅಧ್ಯಕ್ಷರಾಗಿದ್ದಾರೆ. ನಿಮಗೆ ಕೆಟ್ಟ ಹೆಸರು ಬರುತ್ತದೆ. ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಿದರು.
ಕಾರ್ಯಾಧ್ಯಕ್ಷ ವೀರಸಂಗಯ್ಯ ಮಾತನಾಡಿ, ವಿದ್ಯುತ್ ವ್ಯವಸ್ಥೆ ಯನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮಸೂದೆ ಮಂಡಿಸಿದೆ. ಅದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 45 ಲಕ್ಷ ಕೃಷಿ ಪಂಪ್ ಸೆಟ್ ಗಳಿವೆ. 2.5 ಕೋಟಿ ಜನ ಪ್ರತ್ಯಕ್ಷ, ಪರೋಕ್ಷವಾಗಿ ಕೆಲಸ ಪಡೆದುಕೊಂಡಿದ್ದಾರೆ. ಖಾಸಗೀಕರಣ ಆದರೆ, ಉಚಿತ ವಿದ್ಯುತ್ ನಿಲ್ಲಿಸಲಾಗುತ್ತದೆ. ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಅದರ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಅನವಶ್ಯಕವಾಗಿ ಕೇಂದ್ರದ ಗ್ರಿಡ್ ಗೆ ಸಾವಿರಾರು ಕೋಟಿ ಪಾವತಿಸಲಾಗುತ್ತಿದೆ ಎಂದು ದೂರಿದರು.