ಸರ್ಕಾರ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಇಳಿಸಲಿ

1002779322
Published on

ಶ್ರೀರಂಗಪಟ್ಟಣ: ರಾಜ್ಯದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕ ಅಧಿಕವಾಗಿದ್ದು, ಬಡ ವಿದ್ಯಾರ್ಥಿಗಳ ಪಾಲಿಗೆ ಹೊರೆಯಾಗಿದ್ದು, ಶುಲ್ಕ ಪ್ರಮಾಣವನ್ನು ರಾಜ್ಯಸರ್ಕಾರ ಇಳಿಸಬೇಕು ಎಂದು ಬಿಜೆಪಿ ಯುವ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ ಒತ್ತಾಯಿಸಿದರು.

ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಬುಧವಾರ ಮೆರಿಟ್ ಆಧಾರದ ಮೇಲೆ ವೈದ್ಯಕೀಯ ಶಿಕ್ಷಣ ಕೋರ್ಸ್‌ಗೆ ಸರ್ಕಾರಿ ಸೀಟು ಪಡೆದಿರುವ ಯತೀಂದ್ರ ಮುಕುಂದ ಮತ್ತು ಎನ್. ದಿಶಾ ಅವರಿಗೆ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳು ಮೆರಿಟ್ ಆಧಾರದ ಮೇಲೆ ಸರ್ಕಾರಿ ಕೋಟಾದಲ್ಲಿ ಎಂಬಿಬಿಸ್, ಇಂಜಿನಿಯರಿಂಗ್ ಇತರ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳಿಗೆ ಸೀಟು ಪಡೆದರೂ ಸಹ ಪ್ರಸ್ತುತ ಇರುವ ಶುಲ್ಕ ಭರಿಸಲು ಕಷ್ಟವಾಗಿದ್ದು, ಇಂತಹ ವಸ್ತುಸ್ಥಿತಿ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಗ್ರಾಮದ ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್‌ಗೆ ಆಯ್ಕೆಯಾಗಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ಉತ್ತಮ ದರ್ಜೆಯ ಲ್ಯಾಪ್‌ಟಾಪ್ ನೀಡಲಾಗುತ್ತಿದ್ದು, ಅಂತಹವರು ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಇದೇ ವೇಳೆ ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರೇಗೌಡ ಮಾತನಾಡಿ, ಇಂಡುವಾಳು ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಬಡ ಜನರ ಕಲ್ಯಾಣಕ್ಕೆ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕುಸ್ತಿಪಟು ಪೈ.ಮುಕುಂದ, ಪಿಎಸಿಎಸ್ ಮಾಜಿ ಅಧ್ಯಕ್ಷ ನಾಗರಾಜು, ಗ್ರಾ.ಪಂ. ಸದಸ್ಯರಾದ ಟೆಂಪೊ ಪ್ರಕಾಶ್, ರೇಖಾ, ಗಾಯತ್ರಿ, ಲೋಕೇಶ್, ಮಂಜುಳಾ, ಮಾಜಿ ಸದಸ್ಯ ಗಿರೀಶ್, ಮುಖಂಡರಾದ ಪಿ.ಎಚ್. ಚಂದ್ರಶೇಖರ್, ಸುಖೇಶ್, ಶೇಖರ್, ಯಜಮಾನ್ ಶ್ರೀಧರ್, ಪೈ. ಉಮೇಶ್, ಸಂಜೀವಣ್ಣ, ಪ್ರಗತಿ ಪರ ರೈತ ರೇಡಿಯೋ ರಮೇಶ್ ಈ ವೇಳೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net