

ಹುಬ್ಬಳ್ಳಿ: ವಕ್ಪ್ ಆಸ್ತಿ ಬಗ್ಗೆ ನೋಟಿಸ್ ನೀಡುವ ಮೂಲಕ ರಾಜ್ಯಸರ್ಕಾರ ಹೀನ ಮಟ್ಟಕ್ಕೆ ಇಳಿದಿದೆ. ರಾಜ್ಯ ಸರ್ಕಾರ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದು ರೈತರ ಕ್ಷಮೆಯಾಚಿಸಬೇಕು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ರಾಜ್ಯ ಸರ್ಕಾರದ ಮಿಸ್ ಮ್ಯಾನೇಜಮೆಂಟ್.</p><p>ವಕ್ಪ್ ಬೋರ್ಡ್ಗೆ ಆಸ್ತಿ ನೀಡುವ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಇಳಿದಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಪ್ರತಿ ಬಾರಿ ತಪ್ಪು ಹೆಜ್ಜೆ ಇಡುತ್ತಿದೆ ಎಂದರು.
ರೈತರ ಜಮೀನು ಕಬಳಿಸುವ ತಂತ್ರ ಇದಾಗಿದೆ. ಇದರಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ. ನಮ್ಮ ಕಾಲದಲ್ಲಿ ಒಂದೋ ಎರಡೋ ಪ್ರಕರಣಗಳು ಆಗಿರಬಹುದು. ರೈತರ ಹಿತಾಸಕ್ತಿ ಕಾಪಾಡುವ, ತುಷ್ಟೀಕರಣ ಖಂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ನಮ್ಮ ಸತ್ಯಶೋಧನ ಸಮಿತಿ ವರದಿ ತಯಾರಿಸಲಿದೆ ಎಂದು ಹೇಳಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಸಾಬೀತು ಆಗಿದೆ. ಸರ್ಕಾರದ ಮೇಲೆ ಜನರ ನಂಬಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸಿಎಂ ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದು ಎಂದು ಅಧಿಕಾರಿಗಳು ಅಸಡ್ಡೆಯಿಂದ ಕೆಲಸ ಮಾಡುತ್ತಿದ್ದಾರೆ. ಇಡಿ ಅಧಿಕಾರಿಗಳು ವಿಚಾರಣೆಗೆ ಬಂದರೆ ಅಧಿಕಾರಿಗಳು ಮಾಹಿತಿ ನೀಡದೆ ಓಡಿ ಹೋಗುತ್ತಿದ್ದಾರೆ ಎಂದರು.