

ಯಾದಗಿರಿ: ನಾಗರಿಕ ಸಮಾಜ ಪ್ರಸ್ತುತ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಶಿಕ್ಷಣದಿಂದ ಮಾತ್ರ ಪರಿಹಾರ ಸಿಗಲು ಸಾಧ್ಯ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ತಿಳಿಸಿದರು.
ನಗರದ ಬಸವೇಶ್ವರ ಗಂಜ್ ಸರ್ಕಲ್ ಬಳಿ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ 2.50 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ, ಗ್ರಂಥಾಲಯ, ಕಂಪ್ಯೂಟರ್ ಹಾಗೂ ಲ್ಯಾಬ್ ಕೋಣೆಗಳ ನಿರ್ಮಾಣ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸರ್ಕಾರದ ನಾನಾ ಯೋಜನೆಗಳ ಲಾಭ ಪಡೆದು ಶೈಕ್ಷಣಿಕ ಗುರಿ ಮುಟ್ಟಬೇಕು. ನಗರ ಹಾಗೂ ಗ್ರಾಮೀಣ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಹೊಸ ಶಾಲಾ ಕೋಣೆ ಮತ್ತು ಶೌಚಗೃಹ ನಿರ್ಮಾಣಕ್ಕೆ ಗಮನಹರಿಸಿದ್ದು, ವಸತಿ ನಿಲಯ ವ್ಯವಸ್ಥಾಪಕರು ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವ ಜತೆಗೆ ಅಗತ್ಯ ಸೌಕರ್ಯ ಒದಗಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದಿಂದ ಕೆಲಸ ಮಾಡಿ, ನಿಗದಿತ ಅವಧಿಯೊಳಗೆ ಕಟ್ಟಡ ನಿಮರ್ಾಣ ಮಾಡಿ ವಿದ್ಯಾಥರ್ಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಜಿಪಂ ಸಿಇಒ ಅಮರೇಶ ನಾಯ್ಕ್ ಮಾತನಾಡಿದರು. ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಯೂಡಾ ಅಧ್ಯಕ್ಷ ರುದ್ರಗೌಡ ಪಾಟೀಲ್, ನಗರಸಭೆ ಸದಸ್ಯ ಚನ್ನಕೇಶವಗೌಡ ಬಾಣತಿಹಾಳ, ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ರಾಘವೇಂದ್ರ ಇದ್ದರು.