ಸರ್ಕಾರ ತಂಬಾಕು ಬೆಳೆಗಾರರ ನೆರವಿಗೆ ಧಾವಿಸಲಿ

IMG-20201114-WA0022
Published on

ಮೈಸೂರು: ತಂಬಾಕು ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಂಸದ ಆರ್. ಧ್ರುವ ನಾರಾಯಣ್ ಆಗ್ರಹಿಸಿದರು.
ತಂಬಾಕು ಬೆಳೆ ಕುಸಿತಕ್ಕೆ ಸರ್ಕಾರವೇ ಕಾರಣ. ಈ ಬೆಳೆಗಾರರು ಶೇ.18ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದು, ಜತೆಗೆ, ಕೇಂದ್ರ, ರಾಜ್ಯಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸಾಕಷ್ಟು ಆದಾಯ ಬರುತ್ತಿದ್ದರೂ ಇವರಿಗೆ ಯಾವುದೇ ಅನುಕೂಲ ಕಲ್ಪಿಸಿಕೊಟ್ಟಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಳೆದ 3 ವರ್ಷಗಳಿಂದ ಉತ್ಪಾದನಾ ವೆಚ್ಚ ಏರಿಕೆಯಾಗುತ್ತಿದ್ದರೆ, ತಂಬಾಕು ಬೆಳೆಯ ದರ ಮಾತ್ರ ಕುಸಿಯುತ್ತಿದೆ. 2017-18ರಲ್ಲಿ 139.30 ಪೈಸೆ, 2018-19ರಲ್ಲಿ 142.28 ಪೈಸೆ, 2019-20ರಲ್ಲಿ 124 ರೂ.ಗೆ (ಪ್ರತಿ ಕೆಜಿ) ಹೊಗೆಸೊಪ್ಪು ಖರೀದಿಸಲಾಗುತ್ತಿದೆ. ಒಂದು ಕೆಜಿ ತಂಬಾಕು ಬೆಳೆಯಲು ಅಂದಾಜು 140 ರೂ. ಖರ್ಚಾಗುತ್ತದೆ. ಆದ್ದರಿಂದ ಈ ಸಲ ಪ್ರತಿ ಕೆಜಿಗೆ 170 ರೂ. ನೀಡಿ ತಂಬಾಕು ಖರೀದಿಸಲು ಮಂಡಳಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
 ಉತ್ಕೃಷ್ಟ ತಂಬಾಕು ಬೆಳೆಯುತ್ತಿರುವ ರೈತರ ಅನುಕೂಲಕ್ಕಾಗಿ ಆಂಧ್ರದ ಮಾದರಿಯಲ್ಲಿ 300 ಕೋಟಿ ರೂ. ಆವರ್ತ ನಿಧಿ ಸ್ಥಾಪಿಸಿ ಬೆಂಬಲ ಬೆಲೆಯಲ್ಲಿ ತಂಬಾಕು ಖರೀದಿಸಬೇಕು ಎಂದು ಒತ್ತಾಯಿಸಿದರು.
ವಾಣಿಜ್ಯ ಬೆಳೆಯಾದ ತಂಬಾಕನ್ನು ಆಂಧ್ರ ಬಿಟ್ಟರೆ ಕರ್ನಾಟಕದ ಮೈಸೂರು, ಹಾಸನ, ಶಿವಮೊಗ್ಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಅದರಲ್ಲೂ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ತಾಲೂಕಿನಲ್ಲಿ ಬೆಳೆಯುವ ತಂಬಾಕು ಹೆಚ್ಚಿನ ಗುಣಮಟ್ಟದಿಂದ ಕೂಡಿದೆ. 2019-20ರಲ್ಲಿ 2.63 ಲಕ್ಷ ಟನ್ ತಂಬಾಕು ರಪ್ತು ಮಾಡಿದ್ದು, 4,979 ಕೋಟಿ ರೂ. ವಹಿವಾಟು ಆಗಿದೆ. ಈ ಬೆಳೆಯನ್ನೇ 3.60 ಲಕ್ಷ ಕುಟುಂಬಗಳು ಪ್ರತ್ಯೇಕ-ಪರೋಕ್ಷವಾಗಿ ಅವಲಂಬಿಸಿವೆ. ರಾಜ್ಯ, ಕೇಂದ್ರ ಸರ್ಕಾರಕ್ಕೆ 25 ಸಾವಿರ ಕೋಟಿ ರೂ, ಸೀಮಾ ಸುಂಕ ಬಂದರೆ, 6,500 ಕೋಟಿ ರೂ. ವಿದೇಶಿ ವಿನಿಮಯದಿಂದ ತೆರಿಗೆ ಸಂಗ್ರಹವಾಗಿದೆ. ಆದ್ದರಿಂದ ಈ ಬೆಳೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
 ಏಕಸ್ವಾಮ್ಯ ಸಲ್ಲದು
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ತಂಬಾಕು ಮಂಡಳಿ ಇದ್ದರೂ ನಿರೀಕ್ಷಿತ ದರ ದೊರೆಯುತ್ತಿಲ್ಲ. ಹರಾಜಿನಲ್ಲಿ ಪಾಲ್ಗೊಳ್ಳುವ ಐಟಿಸಿ ಕಂಪನಿಯು ತನ್ನದೇ ಆದ ಏಕಸ್ವಾಮ್ಯತೆ ಹೊಂದಿ ಇಡೀ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಿದೆ. ಆದ್ದರಿಂದ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ತಂಬಾಕು ಬೆಳೆಯುವವರಿಗೆ ಆರೋಗ್ಯ ವಿಮೆ ಮತ್ತು ಆರೋಗ್ಯ ಕಾರ್ಡ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಸಾದ್ ಅವರ ಕೊಡುಗೆ ಏನು?
ನನ್ನನ್ನು, ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದೇ ಸಾಧನೆ ಎಂದು ಕೆಲವರು ಅಂದು ಕೊಂಡಿದ್ದಾರೆ. ನಮ್ಮದು ಅವಿತುಕೊಳ್ಳುವ ಜಾಯಮಾನವಲ್ಲ. ನಾನು ಚುನಾವಣೆಯಲ್ಲಿ ಸೋತ ದಿನ, ಅಂದು ಸಂಜೆಯೇ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡೆ. ಆದರೆ, ನನ್ನನ್ನು ಸೋಲಿಸಿದವರು ಕಳೆದ ಒಂದುವರೆ ವರ್ಷದಿಂದ ನೀಡಿರುವ ಕೊಡುಗೆಯಾದರೂ ಏನು? ಎಂದು ಹೆಸರು ಹೇಳದೆ ಸಂಸದ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಮಾಜಿ ಸಂಸದ ಆರ್.ಧ್ರುವನಾರಾಯಣ್ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net