

ಹಾಸನ: ಮಲೆನಾಡು ಭಾಗದ ಬೆಳೆಗಾರರಿಗೆ ಸರ್ಕಾರ ಒತ್ತುವರಿ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿರುವ ನಿರ್ಧಾರ ಹಿಂಪಡೆದು ಭೂ ರಹಿತರಿಗೆ ನೀಡಬೇಕು ಎಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಮುಖಂಡ ಮರಿ ಜೋಸೆಫ್ ಹೇಳಿದರು.
ಮಲೆನಾಡು ಭಾಗದಲ್ಲಿ ಕಾಫಿ ಬೆಳೆಗಾರರು ಸಾಕಷ್ಟು ಸರ್ಕಾರಿ ಜಾಗ ಒತ್ತುವರಿ ಮಾಡಿ, ಕಾಫಿ ತೋಟ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಸರ್ಕಾರವೂ ಅವರಿಗೇ ಅನುಕೂಲ ಆಗುವಂತೆ ಒತ್ತುವರಿ ಮಾಡಿರುವ ಜಾಗವನ್ನು ಅವರಿಗೇ ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿರುವುದು ಖಂಡನೀಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಭೂ ಮಾಲೀಕರ ಪೈಕಿ ಬಹುತೇಕ ಎಲ್ಲರೂ ದೊಡ್ಡ ಮಟ್ಟದಲ್ಲಿ ಭೂಮಿ ಹೊಂದಿರುವವರೇ ಆಗಿದ್ದಾರೆ. ಹಾಗಾಗಿ ಉಳ್ಳವರಿಗೆ ಭೂಮಿ ನೀಡುವ ಬದಲಾಗಿ ಭೂ ರಹಿತರಿಗೆ ನೀಡುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕಿದೆ.ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 40 ಸಾವಿರ ಎಕರೆ ಭೂಮಿ ಒತ್ತುವರಿಯಾಗಿದೆ. ಆ ಜಾಗವನ್ನು ಉಳ್ಳವರಿಗೆ ಕೊಡುವ ಬದಲಾಗಿ ನಿರುದ್ಯೋಗಿ ಯುವಜನತೆಗೆ ತಲಾ 4 ಎಕರೆ ಯಂತೆ ನೀಡಬಹುದು ಎಂದರು.
ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವ ಜನತೆಗೆ ಒತ್ತುವರಿ ಜಮೀನು ನೀಡಿದಲ್ಲಿ ಹಾಸನ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಕುಟುಂಬಗಳ ಜೀವನಕ್ಕೆ ಆಧಾರವಾಗಲಿದೆ.ಕಾಡುಮನೆ ಎಸ್ಟೇಟ್, ಟಾಟಾ ಕಂಪನಿ, ನಿರ್ಮಾ ಎಸ್ಟೇಟ್, ಶಂಕರ್ ಎಸ್ಟೇಟ್, ಸೇರಿದಂತೆ ದೊಡ್ಡ ಭೂ ಹಿಡುವಳಿದಾರರು ಸಾವಿರಾರು ಎಕರೆ ಭೂಮಿ ಒತ್ತುವರಿ ಮಾಡಿದ್ದು, ಕೂಡಲೇ ಅವುಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಅಂಬುಗ ಮಲ್ಲೇಶ್, ಆರ್‌ಪಿಐ ಸತೀಶ್, ನವೀನ್ ಸದಾ, ನಾಗರಾಜ್ ಹೆತ್ತೂರು ಇದ್ದರು.