

ಹಾಸನ: ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ.ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಹೇಳಿದರು.
ಜಿಲ್ಲೆಗೆ ದೇವೇಗೌಡರ ಕುಟುಂಬದ ಕೊಡುಗೆ ಅಪಾರವಾಗಿದೆ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೇವಣ್ಣ ಅವರು ಸಾಕಷ್ಟು ಅನುದಾನಗಳನ್ನು ತಂದು ಜಿಲ್ಲೆಯನ್ನ ಅಭಿವೃದ್ಧಿಪಡಿಸಿದ್ದಾರೆ ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮತದಾರರು ಅವರನ್ನು ಬೆಂಬಲಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜನರಿಗೆ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲಿ ಬಿಜೆಪಿ ಹಾಗು ಜೆಡಿಎಸ್ ನಾಯಕರು ಒಟ್ಟಾಗಿ ಪ್ರತಿಭಟನೆ ಮಾಡಿದ್ದೇವೆ. ಈ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್‌ನವರು ಬರ ಪರಿಹಾರ ನೀಡಲು ಕೇಂದ್ರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡುತ್ತಿದೆ. ನಮ್ಮ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್‌ಗೆ ಅಸ್ತ್ರಗಳೇ ಇಲ್ಲವಾಗಿದೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಜೂನ್ 4 ರಂದು ರಾಜ್ಯದ ಜನರು ಚೊಂಬು ಕೊಡುವುದು ಗ್ಯಾರಂಟಿ, ಅದು ಪ್ಲಾಸ್ಟಿಕ್‌ನದ್ದೋ ಅಥವಾ ತಗಡಿನದ್ದೋ ಎಂಬುದನ್ನು ಕಾದು ನೋಡಿ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಇಷ್ಟು ದಿನ ದಿನಪತ್ರಿಕೆಗಳಿಗೆ ಗ್ಯಾರಂಟಿಗಳ ಜಾಹೀರಾತು ನೀಡುತ್ತಿತ್ತು. ಆದರೆ ಅದು ಸಫಲವಾಗುವುದಿಲ್ಲ ಎಂಬುದನ್ನು ಅರಿತು ಚೊಂಬಿನ ಜಾಹೀರಾತು ನೀಡುತ್ತಿದೆ. ಕೊನೆಗೆ ಕಾಂಗ್ರೆಸ್‌ಗೆ ಸಿಗುವುದು ಚೊಂಬು ಎಂದರು.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುವುದು ಖಚಿತವಾಗಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುತ್ತಾರೆ. ಅವರ ನಾಯಕತ್ವವನ್ನು ದೇಶದ ಎಲ್ಲರೂ ಒಪ್ಪಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಮುಖಂಡರಾದ ನವಿಲೆ ಅಣ್ಣಪ್ಪ, ಕೇಶವಮೂರ್ತಿ, ಪುಟ್ಟರಾಜು, ನಾಗಣ್ಣ, ಇದ್ದರು.