

ಕಾರವಾರ: `"ಇನ್ನು ಮುಂದೆ ಗೋವುಗಳ ಕಳ್ಳತನ, ಅಕ್ರಮ ಹತ್ಯೆ ನಡೆದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾಕಿಸ್ತೇನೆ"ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಗುಡುಗಿದರು. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ನಮ್ಮ ಜಿಲ್ಲೆಯಲ್ಲಿ ಬೇಕಾದಷ್ಟು ಕೆಲಸವಿದೆ. ದುಡಿದು ತಿನ್ನಬೇಕು. ಹೊರತೂ ಅಂಥ ಕೆಲಸ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಆಕಳ ಕಳ್ಳತನ ಬಹಳ ವರ್ಷಗಳಿಂದ ನಡೆಯುತ್ತಿದೆ. ಹಿಂದೆ ಬಿಜೆಪಿ ಅವಧಿಯಿಂದಲೂ ನಡೆಯುತ್ತಿತ್ತು. ಆದರೆ, ಅವರು ತಡೆಯುವ ಕೆಲಸ ಮಾಡಿಲ್ಲ.
ಆದರೆ, ನಾನು ಸುಮ್ಮನಿರುವ ಪ್ರಶ್ನೆ ಇಲ್ಲ. ಇದನ್ನು ಬಂದ್ ಮಾಡಿ ಎಂದು ಎಸ್‌ಪಿ ಅವರಿಗೆ ಆದೇಶ ನೀಡಿದೆ. ಆಕಳು ನಾವು ಪೂಜೆ ಮಾಡುವಂಥದ್ದು, ನಾವು ಪ್ರೀತಿಯಿಂದ ಸಾಕುವ ಪ್ರಾಣಿ. ಹಸುವಿನ ಹಾಲು ಕುಡಿದು ಬೆಳೆದವರು. ಹಾಗಾಗಿ ಯಾರೇ ಇದ್ದರೂ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದೇನೆ ಎಂದರು.
ನಾನು ಸಚಿವನಾಗುವುದಕ್ಕೂ ಮೊದಲೇ ಒಬ್ಬ ಉದ್ಯಮಿ. ಒಂದು ವರ್ಷಕ್ಕೆ ಸುಮಾರು ಒಂದುವರೆ ಕೋಟಿ ರೂ.ಗಳ ವಿದ್ಯುತ್ ಬಿಲ್ ಕಟ್ಟುತ್ತೇನೆ. ನನ್ನ ಮೂರು ಐಸ್ ಫ್ಯಾಕ್ಟರಿ ಇದೆ. ಶಾಲೆ ಇದೆ. ಹೋಟೆಲ್ ಇದೆ.
ತಿಂಗಳಿಗೆ ಸುಮಾರು 8 ರಿಂದ 25 ಲಕ್ಷ ರೂ.ವರೆಗೂ ವಿದ್ಯುತ್ ಬಿಲ್ ಬರುತ್ತದೆ. ಕೆಲವೊಮ್ಮೆ ಒಂದು ತಿಂಗಳು ವಿದ್ಯುತ್ ಬಿಲ್ ಪಾವತಿ ಬಾಕಿ ಇರಬಹುದು. ಆದರೆ, ಅದನ್ನು ಬಡ್ಡಿ ಸಮೇತ ಕಟ್ಟುತ್ತೇನೆ.
ಅದಕ್ಕಿಂತ ಹೆಚ್ಚು ಯಾವುದೇ ಕಾರಣಕ್ಕೂ ವಿದ್ಯತ್ ಬಿಲ್ ಬಾಕಿ ಇರಿಸಿಕೊಂಡಿಲ್ಲ .ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ಪಷ್ಟನೆ ನೀಡಿದರು.
ಮಾಹಿತಿ ಹಕ್ಕಿನಡಿ ಭಟ್ಕಳ ಮೂಲದ ವ್ಯಕ್ತಿಯೊಬ್ಬರು ದಾಖಲೆಗಳಲ್ಲಿ ಸಚಿವರು 8 ಲಕ್ಷ ರೂ. ವಿದ್ಯುತ್ ಬಿಲ್ ಕಟ್ಟುವುದು ಬಾಕಿ ಇದೆ ಎಂದಿತ್ತು.
ಆ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಯಾವುದೇ ಕಾರಣಕ್ಕೂ ಹೆಸ್ಕಾಂಗೆ ಮೋಸ ಮಾಡುವ ಪ್ರಶ್ನೆ ಇಲ್ಲ ಎಂದು ಸಚಿವರು ತಿಳಿಸಿದರು.