ಸರ್.ಎಂ.ವಿಶ್ವೇಶ್ವರಯ್ಯ ಕೆಲಸಕ್ಕೆ ದೇಶಕ್ಕೆ ಮಾದರಿ: ಎಚ್.ಬಿ.ಮಲ್ಲೇಶ್

ಸರ್.ಎಂ.ವಿಶ್ವೇಶ್ವರಯ್ಯ ಕೆಲಸಕ್ಕೆ ದೇಶಕ್ಕೆ ಮಾದರಿ: ಎಚ್.ಬಿ.ಮಲ್ಲೇಶ್
Published on

ಹಾಸನ: ಸರ್.ಎಂ.ವಿಶ್ವೇಶ್ವರಯ್ಯನವರ ಪರಿಶ್ರಮದ ಫಲವಾಗಿ ದೇಶದಲ್ಲಿ ಹಲವಾರು ಅಣೆಕಟ್ಟುಗಳು ನಿರ್ಮಾಣವಾಗಿದ್ದು, ಇದರಿಂದ ಕೃಷಿಗೆ ಹೆಚ್ಚು ಪ್ರಯೋಜನವಾಗಿದೆ. ಅವರು ಸ್ಥಾಪಿಸಿದ ವಿದ್ಯುತ್ ಸ್ಥಾವರಗಳಿಂದ ಇಂದು ನಾವು ವಿದ್ಯುತ್ ಪಡೆಯುತ್ತಿದ್ದೇವೆ’ ಎಂದು ಎತ್ತಿನ ಹೊಳೆ ಯೋಜನೆಯ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಬಿ.ಮಲ್ಲೇಶ್ ತಿಳಿಸಿದರು.
ನವ್ ಕೀಸ್ ಕಾಲೇಜಿನಲ್ಲಿ ಭಾನುವಾರ ಇಂಜಿನಿಯರಿಂಗ್ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನದ ಜ್ಞಾಪಕಾರ್ಥವಾಗಿ ಭಾರತದಾದ್ಯಂತ ರಾಷ್ಟೀಯ ಎಂಜಿನಿಯರ್ ದಿನವನ್ನು ಆಚರಿಸಲಾಗುತ್ತಿದೆ.ಅವರ ಕೊಡುಗೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಎತ್ತಿನ ಹೊಳೆಯ ಯೋಜನೆ ಬಗ್ಗೆ ಮಾತನಾಡುತ್ತ, ಪಶ್ಚಿಮ ಘಟ್ಟದಿಂದ ಸಮುದ್ರ ಸೇರುವ 200 ಟಿಎಂಸಿ ನೀರಿನಲ್ಲಿ ಕೇವಲ 20 ಟಿಎಂ ಸಿ ನೀರನ್ನು ಮೋಟಾರುಗಳ ಮೂಲಕ ಮೇಲೆತ್ತಿ ನೀರಿನ ಅಭಾವ ಇರುವ ಏಳು ಜಿಲ್ಲೆಗಳಿಗೆ ಪೂರೈಸಲಾಗುವುದು. ಈ ಯೋಜನೆಯಿಂದ 352 ಕೆರೆಗಳನ್ನು ತುಂಬಿಸಲಾಗುತ್ತಿದ್ದು, ಇದರಿಂದಾಗಿ ಜಲ ಮರುಪೂರಣ ಕೆಲಸ ನೆಡೆಯಲಿದೆ.ಈ ಯೋಜನೆಯ 14ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲಾಗುವುದು ಎಂದರು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿರುಮಲೇಶ್ ಅವರು ಮಾತನಾಡುತ್ತಾ, ಯೋಜನೆಯ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ವೇಣುಗೋಪಾಲ್ ರಾವ್ ಅವರು ಇಂತಹ ಯೋಜನೆಗಳಿಂದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಹೆಚ್ಚು ಪ್ರಯೋಜನ ಪಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಡಾ .ಎಂ.ಟಿ. ಪ್ರತಾಪ್ ಕುಮಾರ್, ಸಂಯೋಜಕ ರಾಕೇಶ್ ಹಾಗು ಪ್ರಾದ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net