ಮಧುಗಿರಿ: ತಾಲೂಕಿನ ಕಸಬಾ ವ್ಯಾಪ್ತಿಯ ಡಿವಿ ಹಳ್ಳಿಯ ಅಂಧ ಗಾಯಕಿ, ಖಾಸಗಿ ವಾಹಿನಿಯ ಸರಿಗಮಪ ಖ್ಯಾತಿಯ ಮಂಜಮ್ಮ (39)ಅವರು ಅನಾರೋಗ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾದರು. ಬಹು ಅಂಗಾಂಗ ವೈಲ್ಯದಿಂದ ಅವರು ಬಳಲುತ್ತಿದ್ದರು. ಮಂಗಳವಾರ ಡಿವಿ ಹಳ್ಳಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.
ದೇವಸ್ಥಾನದ ಮುಂದೆ ಹಾಡುತ್ತಿದ್ದ ಗಾಯಕಿಯರು: ಡಿವಿ ಹಳ್ಳಿಯ ಅಂಧ ಗಾಯಕಿಯರಾದ ಮಂಜಮ್ಮ, ರತ್ನಮ್ಮ ಈ ಮೊದಲು ಮಧುಗಿರಿ ಪಟ್ಟಣದ ಮಾರಮ್ಮ ದೇವಸ್ಥಾನದ ಮುಂದೆ ದೇವಿಯ ಬಗ್ಗೆ ಸುಶ್ರಾವ್ಯವಾಗಿ ಹಾಡು ಹಾಡುತ್ತಿದ್ದರು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರೊಬ್ಬರು ಇದನ್ನು ಗಮನಿಸಿ ಇವರು ಹಾಡುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರಿಂದ ಇವರ ಹಾಡುಗಳು ವೈರಲ್ ಆಗಿದ್ದವು. ಇದರಿಂದ 2020ರಲ್ಲಿ ಖಾಸಗಿ ಟಿವಿ ವಾಹಿನಿಯ ಸರಿಗಮಪಗೆ ಆಯ್ಕೆಯಾದರು. ಅಲ್ಲಿ ಇವರ ಹಾಡುಗಳು ವೀಕ್ಷಕರ ಗಮನ ಸೆಳೆದು ರಾಜ್ಯಾದ್ಯಂತ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದರು.
2020ರಲ್ಲಿ ನಟ ಜಗ್ಗೇಶ್ ಅವರು ಪತ್ನಿಯೊಂದಿಗೆ ಮನೆಯಲ್ಲಿ ಸರಿಗಮಪ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಅಂಧ ಸಹೋದರಿಯರು ಮನೆಯ ಕಷ್ಟ ಹೇಳಿಕೊಂಡು ಕಣ್ಣೀರಿಟ್ಟಿದ್ದನು ಕಂಡು ಕೊರಟಗೆರೆಯ ಜಗ್ಗೇಶ್ ಅಭಿಮಾನಿಗಳ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ನ ಮಲ್ಲಯ್ಯ ಮತ್ತು ಕೆ.ಎನ್.ರವಿಕುಮಾರ್ ಅವರಿಗೆ ತಿಳಿಸಿ, ಡಿ.ವಿ.ಹಳ್ಳಿ ಗ್ರಾಮದಲ್ಲಿ ಸಹೋದರಿಯರಿಗೆ ಸುಂದರ ಮನೆ ನಿರ್ಮಿಸಿಕೊಟ್ಟಿದ್ದರು. ಜತೆಗೆ ಮನೆಯ ಗೃಹಪ್ರವೇಶಕ್ಕೆ ದಂಪತಿ ಸಮೇತ ತೆರಳಿ ಶುಭ ಹಾರೈಸಿದ್ದ ಅವರು ಮಂಜಮ್ಮ, ರತ್ನಮ್ಮ ಸಹೋದರಿಯರ ಶಾರದೆಯನ್ನು ಹುಡುಕಿಕೊಂಡು ನಾನು ಮಧುಗಿರಿಗೆ ಬಂದಿದ್ದೇನೆ ಎಂದು ಜಗ್ಗೇಶ್ ತಿಳಿಸಿದ್ದರು. ಇದರ ಜತೆಗೆ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಅರ್ಜುನ್ ಜನ್ಯ ಅವರು ಮಂಜಮ್ಮ ಮತ್ತು ರತ್ನಮ್ಮ ಅವರಿಗೆ ಪ್ರತಿ ದಿನಕ್ಕೆ ಬೇಕಾದ ಅಕ್ಕಿ ಬೇಳೆ ಸೇರಿ ಆಹಾರ ಪದಾರ್ಥಗಳನ್ನು ಪ್ರತಿ ತಿಂಗಳು ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ.