

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಾರ್ಡ್ ನಂ. 59ರ ವ್ಯಾಪ್ತಿಯ ಕುಸುಗಲ್ಲ್ ರಸ್ತೆಯ ಸರಸ್ವತಿಪುರಂ ಬಡಾವಣೆಗೆ ರಸ್ತೆ, ಗಟಾರ, ಬೀದಿ ದೀಪ, ಇತ್ಯಾದಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಸರಸ್ವತಿಪುರಂ ಸಿಟಿಜನ್ ವೆಲ್ಪೇರ್ ಕಮಿಟಿ ವತಿಯಿಂದ ಇತ್ತೀಚೆಗೆ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಬಡಾವಣೆಯ ಅರ್ಧದಷ್ಟು ನಿವೇಶನಗಳಲ್ಲಿ ಮನೆಗಳು ನಿರ್ವಣಗೊಂಡಿವೆ. ಆದರೆ, ಒಳಚರಂಡಿ ಕೊಳವೆ ಮಾರ್ಗ, ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಸಮರ್ಪಕವಾಗಿಲ್ಲ. ಬಹುತೇಕ ರಸ್ತೆಯೇ ಇಲ್ಲ, ಗಟಾರ, ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಸಂಜೆ ಹಾಗೂ ರಾತ್ರಿ ವೇಳೆ ಸಂಚರಿಸಲು ಭಯ ಹುಟ್ಟಿಸುತ್ತದೆ ಎಂದು ದೂರಿದ್ದಾರೆ.
ಇಲ್ಲಿಯ ಸಮಸ್ಯೆಗಳನ್ನು ಸಂಸದರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ಗಮನಕ್ಕೆ ತಂದಿದ್ದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಯ ನಿವಾಸಿಗಳು ಸಕಾಲಕ್ಕೆ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಆದರೆ, ಪಾಲಿಕೆಯವರು ಪೂರ್ಣ ಪ್ರಮಾಣದಲ್ಲಿ ಮೂಲಸೌಕರ್ಯ ಒದಗಿಸಲು ಹಿಂದೇಟು ಹಾಕುತ್ತಿರುವುದು ಯಾಕೆಂದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಕಮಿಟಿಯ ಅಧ್ಯಕ್ಷ ಪ್ರಸನ್ನ, ಪ್ರಕಾಶ ಯಳವತ್ತಿ, ಜಗದೀಶ ಹೊಂಬಳ, ಟಿ. ಪ್ರಭಾಕರ, ಕಾಶಿನಾಥ ನಿರಂಜನ, ಅನಿಲ ಮಿಸ್ಕಿನ, ಅನಿಲ ಪೂಜಾರಿ, ಹನುಮಂತ ನಾಯಕ, ಪ್ರಮೋದ ಬಳ್ಳಾರಿ, ಇತರರು ಇದ್ದರು.