

ಪಾಂಡವಪುರ: ತಾಲೂಕಿನ ಸಣಬ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸರಸ್ವತಿ ತಮ್ಮ ಪ್ರತಿಸ್ಪರ್ಧಿ ರೈತಸಂಘ ಬೆಂಬಲಿತ ಅಭ್ಯರ್ಥಿ ವಿರುದ್ಧ ಭಾರೀ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಲಕ್ಷ್ಮೀಸಾಗರ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಣಬ ಗ್ರಾಪಂನ ಈ ಹಿಂದಿನ ಸದಸ್ಯೆ ಶಿವಲಿಂಗಮ್ಮ ನಿಧನ ಹೊಂದಿದ ಹಿನ್ನೆಲೆಯಲ್ಲಿ ಭಾನುವಾರ ಉಪ ಚುನಾವಣೆ ನಡೆದಿತ್ತು. ಬುಧವಾರ ಫಲಿತಾಂಶ ಪ್ರಕಟಗೊಂಡಿದ್ದು, ಜೆಡಿಎಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸರಸ್ವತಿ ಅವರು 574 ಮತಗಳನ್ನು ಗೆಲುವು ಪಡೆದರೆ ಅವರ ಪ್ರತಿಸ್ಪರ್ಧಿ ರೈತಸಂಘ ಬೆಂಬಲಿತ ಅಭ್ಯರ್ಥಿ ಎಸ್.ಪಿ.ಗೌರಮ್ಮ 256 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಸರಸ್ವತಿ ಅವರು 318 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಒಟ್ಟು 1033 ಮತಗಳಲ್ಲಿ 830 ಮತಗಳು ಚಲಾವಣೆಗೊಂಡಿತ್ತು. 12 ಮತಗಳು ತಿರಸ್ಕೃತಗೊಂಡಿದೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೆಲುವು ಪ್ರಕಟವಾಗುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಹಿ ವಿತರಿಸಿ ಸಂಭ್ರಮಿಸಿದರು.
ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಪಕ್ಷದ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ ಗ್ರಾಮದ ಎಲ್ಲ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸಿದರು.