

ಶೃಂಗೇರಿ: ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ವಸ್ತು ಪ್ರದರ್ಶನ ಮತ್ತು ಮಾರಾಟಕ್ಕೆ ಸೀಮಿತವಾಗಿಸಿಕೊಳ್ಳದೆ ಜಿಲ್ಲೆ ಹಾಗೂ ಸರಸ್ ಮೇಳಗಳಲ್ಲಿ ಮಾರಾಟಮಾಡಬೇಕು ಎಂದು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಆದರ್ಶ ತಿಳಿಸಿದರು.
ಸೋಮವಾರ ಧರೇಕೊಪ್ಪ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆಯ ಒಕ್ಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಮನೆಯಲ್ಲಿಯೇ ತಯಾರಿಸುವ ಸಿಹಿತಿನಿಸು, ಕರಕುಶಲ ವಸ್ತುಗಳು, ಆಹಾರ ಉತ್ಪನ್ನಗಳು ಮತ್ತು ಬೆಳೆಸಿದ ತರಕಾರಿಗಳನ್ನು ಮಾಸಿಕ ಸಂತೆಯಲ್ಲಿ ಮಾರಾಟ ಮಾಡಿ ಹಣ ಸಂಪಾದನೆ ಮಾಡಬಹುದು. ಒಕ್ಕೂಟದ ಸದಸ್ಯರು ಸಾಂಘಿಕ ಭಾವದಿಂದ ಒಗ್ಗೂಡಿ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ ಸರಸ್ ಮೇಳದಲ್ಲಿ ಭಾಗವಹಿಸಿದಾಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತದೆ ಎಂದರು.
ಕೃಷಿಯೇತರ ತಾಲೂಕು ವ್ಯವಸ್ಥಾಪಕಿ ಚೈತ್ರಾ ಮಾತನಾಡಿ, ಮಹಿಳೆಯರು ಕೌಶಲಾಭಿವೃದ್ಧಿ ತರಬೇತಿ ಪಡೆದ ಬಳಿಕ ತಯಾರಿಸಲಾಗುವ ಸಂಜೀವಿನಿ ಉತ್ಪನ್ನಗಳನ್ನು ಅಸ್ಮಿತೆ ಮತ್ತು ಅಕ್ಕ ಬ್ರಾಂಡಿಂಗ್ ಜತೆ ಮಾರುಕಟ್ಟೆಗೆ ಪರಿಚಯಿಸಬೇಕು. ಪ್ರತಿ ಮನೆಯಲ್ಲಿ ಸಂಜೀವಿನಿ ಉತ್ಪನ್ನ ರಾರಾಜಿಸಬೇಕು ಎಂದು ಹೇಳಿದರು.
ಮಾಸಿಕ ಸಂತೆಯಲ್ಲಿ ಸುಮಾರು ಹನ್ನರೆಡು ಮಳಿಗೆಗಳು ಭಾಗವಹಿಸಿ ಉತ್ಪನ್ನಗಳನ್ನು ಮಾರಾಟ ಮಾಡಿ 15,070 ರೂ. ಗಳಿಸಿದವು. ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಪ್ರಭಾವತಿ, ಕಾರ್ಯದರ್ಶಿ ಉಷಾ, ಜಂಟಿ ಕಾರ್ಯದರ್ಶಿ ಕವನಾ, ಗ್ರಾಪಂ ಉಪಾಧ್ಯಕ್ಷ ಭಾನುಪ್ರಕಾಶ್, ಕಾರ್ಯದರ್ಶಿ ರವಿಶಂಕರ್ ಇದ್ದರು.