

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್ಕಾರದ ಇಲಾಖೆಗಳ ಕಾರ್ಯವೈಖರಿ ಪರಿಶೀಲನೆ ಜತೆಗೆ ಜನರಿಗೆ ಅಗತ್ಯವಿರುವ ಸರ್ಕಾರಿ ಸೌಲಭ್ಯಗಳು ಸಕಾಲದಲ್ಲಿ ಸಿಗುವಂತೆ ಮಾಡುವ ಕಾರ್ಯವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಾಡುತ್ತಿದ್ದು, ಅದು ವಾಚ್‌ಡಾಗ್‌ನಂತೆ ಕಾಯುತ್ತಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ವಕೀಲರ ಸಂಘ, ಜಿಲ್ಲಾಡಳಿತ ಹಾಗೂ ಇತರ ಇಲಾಖೆಗಳ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಮತ್ತು ಅರೆ ಕಾನೂನು ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ಲ ವರ್ಗದ ಜನ, ಸಮುದಾಯದಲ್ಲಿ ಕಾನೂನುಗಳ ಅರಿವು ಮೂಡಿಸಿ, ಅರ್ಹರಿಗೆ ನೆರವು ನೀಡಲು ಆಯೋಜಿಸಿದ್ದ ವಿಶೇಷ ಅಭಿಯಾನಗಳು ಯಶಸ್ವಿಯಾಗಿವೆ. ಸುಮಾರು 5 ಲಕ್ಷ ಫಲಾನುಭವಿಗಳಿಗೆ ಅಭಿಯಾನದ ಪ್ರಯೋಜನ ತಲುಪಿದೆ. ಎಲ್ಲರಿಗೂ ಕಾನೂನು ಸೇವೆಗಳು ಲಭ್ಯವಾಗಬೇಕು. ನ್ಯಾಯ ಪಡೆಯುವಲ್ಲಿ ಯಾವುದೇ ತಾರತಮ್ಯ ಇಲ್ಲದೆ ಸಮನಾಗಿ ಎಲ್ಲರಿಗೂ ಸಿಗುವಂತೆ ಸಿಗುವಂತೆ ಮಾಡುವುದು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯವಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳ ವ್ಯಾಪ್ತಿಯಲ್ಲಿ ಕಾನೂನು ಅರಿವು-ನೆರವು ಕುರಿತ ಒಟ್ಟು 2,108 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸುಮಾರು 4,70 ಲಕ್ಷ ಜನರು ಭಾಗಿಯಾಗಿದ್ದಾರೆ ಎಂದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಚ್.ಮಿಟ್ಟಲಕೋಡ ಮಾತನಾಡಿ, ಹಕ್ಕಿನ ವ್ಯಾಜ್ಯಗಳು ರಾಜಿ ಆಗುತ್ತವೆ. ಆದರೆ ಹಠದ ವ್ಯಾಜ್ಯಗಳು ರಾಜಿ ಆಗುವುದಿಲ್ಲ. ಜನರಲ್ಲಿ ಪ್ರಕರಣಗಳ ಸಾಧಕ, ಬಾಧಕಗಳ ಕುರಿತು ಅರಿವು ಮೂಡಿಸಬೇಕು. ವ್ಯಕ್ತಿಗಳ ಸ್ವಾತಂತ್ರೃ ಕಾಪಾಡುವುದು ನ್ಯಾಯಾಧೀಶರ ಕರ್ತವ್ಯ. ಕಾನೂನು ಪಾಲನೆ ಬಗ್ಗೆ ಅರಿವು ಮೂಡಿಸಬೇಕು. ಜನರು ಸುಳ್ಳು ಕೇಸ್ ಹಾಕದಂತೆ ತಿಳಿವಳಿಕೆ ನೀಡಬೇಕು ಎಂದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎ.ಎ.ಮಗದುಮ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಬಿ.ವಿ.ಪಾಟೀಲ, ವಿ.ಡಿ.ಕಾಮರೆಡ್ಡಿ, ಜಿ.ಜಿ. ಅಮೋಘಿಮಠ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಪೊಲೀಸ್ ಪಾಟೀಲ, ಗುರುಶಾಂತಯ್ಯ ಕಲ್ಲಯ್ಯ ಕುರ್ಡಿಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಇತರರು ಇದ್ದರು.
ಪಿ.ಎಫ್.ದೊಡ್ಡಮನಿ ಸ್ವಾಗತಿಸಿದರು. ಪ್ರಭಾವತಿ ಮತ್ತು ಶ್ರೀದೇವಿ ನಿರೂಪಿಸಿದರು. ಸುವರ್ಣಾ ಸುರಕೋಡ ವಂದಿಸಿದರು.