ಸರ್ವ ಧರ್ಮೀಯರ ನೆಚ್ಚಿನ ದೇವಸ್ಥಾನ

dec13 ss 1 devalaya
ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಾಲಯದ ಹೊರನೋಟ.
Published on

ಶನಿವಾರಸಂತೆ: ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಾಲಯ ಈ ಭಾಗದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದ್ದು, ಭಕ್ತರ ಕೋರಿಕೆಯನ್ನು ಈಡೇರಿಸುವ ಮೂಲಕ ಮನೆ ಮಾತಾಗಿದೆ.

ದೇವರ ಪೂಜೆಯಿಂದ ದೊರಕುವ ಫಲ ಎಲ್ಲರಿಗೂ ಒಳಿತು ಮಾಡಿದೆ. ವಿವಾಹವಾಗದಿರುವ, ಮಕ್ಕಳಾಗದಿರುವ, ಸ್ವಂತ ವ್ಯಾಪಾರದಲ್ಲಿ ಹಿನ್ನಡೆ, ಕೃಷಿ ಚಟುವಟಿಕೆಯಲ್ಲಿ ಅಡೆತಡೆ, ವಾಹನ ಖರೀದಿ…ಹೀಗೆ ಸಂಕಷ್ಟಗಳ ಪರಿಹಾರಕ್ಕೆ ಭಕ್ತರು ಬೇಡಿಕೆ ಸಲ್ಲಿಸುವುದು ವಾಡಿಕೆ. ಇಷ್ಟಾರ್ಥ ನೆರವೇರಿದರೆ ಹೂ, ಹಣ್ಣಿನ ಪೂಜೆ, ಅನ್ನಸಂತರ್ಪಣೆ ಮಾಡಿ ಹರಕೆ ತೀರಿಸುತ್ತಾರೆ. ದೇವಾಲಯದ ಸಮಿತಿಯಲ್ಲಿ ಎಲ್ಲ ಸಮಾಜದವರು ಇರುವುದು ಮತ್ತೊಂದು ವಿಶೇಷ. ಈ ವ್ಯಾಪ್ತಿಯ ಸುತ್ತಮುತ್ತಲಿನ 8ಕ್ಕೂ ಹೆಚ್ಚು ಹಳ್ಳಿಗಳು ಸೇರ್ಪಡೆಗೊಳ್ಳುತ್ತವೆ. ಇಲ್ಲಿ ಎಲ್ಲ ಜಾತಿ ಮತ್ತು ಧರ್ಮದ ಜನರು ನೆಲೆಸಿದ್ದಾರೆ. ಹೆಚ್ಚಿನದಾಗಿ ಗೌಡ ಹಾಗೂ ಲಿಂಗಾಯತ ಸಮುದಾಯ, ಕುರುಹೀನ ಶೆಟ್ಟಿ, ಮುಸ್ಲಿಂ, ಕ್ರೈಸ್ತರು ಅನ್ಯೋನ್ಯತೆಯಿಂದ ಇದ್ದಾರೆ.

ಸೋಮವಾರಪೇಟೆ ಹಾಗೂ ಅರಕಲಗೂಡು ರಸ್ತೆಗೆ ಹೊಂದಿಕೊಂಡಂತೆ ಶನಿವಾರಸಂತೆ ಈ ಗ್ರಾಮ ಇದ್ದು, ಈ ಗ್ರಾಮದಲ್ಲೇ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಾಲಯವಿದೆ. ಪ್ರಶಾಂತ ವಾತಾವರಣದಲ್ಲಿ ಈ ದೇವಾಲಯವಿದ್ದು, ಸುಮಾರು 400 ವರ್ಷಗಳ ಹಿಂದಿನದು ಎಂದು ಹೇಳಲಾಗುತ್ತಿದೆ. ವಿವಿಧೆಡೆ ಹಲವು ಹೆಸರುಗಳಿಂದ, ಹಲವು ರೂಪಗಳಿಂದ ಈಶ್ವರನನ್ನು ಪೂಜಿಸಲ್ಪಡುತ್ತಿದ್ದು ಶನಿವಾರಸಂತೆಯಲ್ಲಿ ಬೀರಲಿಂಗೇಶ್ವರ ಎಂದು ಕರೆಯಲ್ಪಡುತ್ತದೆ.
ದೇವರ ಗುಡಿಯನ್ನು ತೆರೆದ ಪ್ರಾಂಗಣದಲ್ಲಿ ನಿರ್ಮಿಸಲಾಗಿದ್ದು, ಕಲ್ಲಿನ ಶಿಲೆಯ ದೇವರನ್ನು ಕಾಣಬಹುದಾಗಿದೆ. 3 ಅಡಿ ಎತ್ತರದಲ್ಲಿ ದೇವರ ಮೂರ್ತಿಯಿದ್ದು ಆಕರ್ಷಕವಾಗಿದೆ. ಮೊದಲು ಮಣ್ಣಿನ ಗೋಡೆಯಿಂದ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿತ್ತು. ವರ್ಷ ಕಳೆದಂತೆ ಕುಸಿಯಲಾರಂಭಿಸಿದ್ದರಿಂದ ಗ್ರಾಮಸ್ಥರು ಮರುನಿರ್ಮಾಣ ಮಾಡಲು ಆಲೋಚಿಸಿದರು.

ಗ್ರಾಮದಲ್ಲಿ ದೇವಾಲಯವಿದ್ದರೆ ಕೆಲಸ-ಕಾರ್ಯಗಳಿಗೆ ಸಹಕಾರಿ ಎಂದು ಚಿಂತನೆ ನಡೆಸಿ ಅದರಂತೆ ಎಲ್ಲರಿಗೂ ಶಾಂತಿ, ಸುಖ, ಐಶ್ವರ್ಯ ಲಭಿಸಬೇಕೆಂಬ ಕಾರಣಕ್ಕೆ ಯೋಜನೆ ರೂಪಿಸಿದರು. ಎಲ್ಲ ಸಮುದಾಯದವರ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ನಂತರ ಸುತ್ತಮುತ್ತಲಿನ ಊರುಗಳಿಗೆ ತೆರಳಿ ಭಕ್ತರು ಹಾಗೂ ದಾನಿಗಳಿಂದ ಹಣ ಹೊಂದಿಸಿ ದೇವಾಲಯ ನಿರ್ಮಾಣ ಕಾರ್ಯವನ್ನು 2018ರಲ್ಲಿ ಮುಕ್ತಾಯಗೊಳಿಸಲಾಯಿತು.

ಗರ್ಭಗುಡಿಯ ಹೊರಗಿನ ಭಾಗದಲ್ಲಿ ಶ್ರೀ ಮಹಾಗಣಪತಿ, ಎಡಭಾಗದಲ್ಲಿ ನವಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಗರ್ಭಗುಡಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕಬ್ಬಿಣದ ಸರಳುಗಳ ಮೂಲಕ ಗೇಟ್ ನಿರ್ಮಾಣ ಮಾಡಲಾಗಿದೆ.

ದೇವಾಲಯದಲ್ಲಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ ನಡೆಯಲಿದ್ದು, ದೂರದೂರುಗಳಿಂದ ಭಕ್ತರು ಆಗಮಿಸಿ ಇಷ್ಟಾರ್ಥ ಈಡೇರಿಕೆಗೆ ಪೂಜೆ ಸಲ್ಲಿಸುತ್ತಾರೆ. ಭಕ್ತಿಪೂರ್ವಕವಾಗಿ ದೇವರನ್ನು ಬೇಡಿಕೊಂಡರೆ ಬೇಡಿಕೆ ಈಡೇರಲಿದೆ ಎಂಬುದು ಹಲವು ಭಕ್ತರ ಅಭಿಪ್ರಾಯ. ಅಲ್ಲದೆ ಹಬ್ಬದ ದಿನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರತಿ ಅಮಾವಾಸ್ಯೆ ದಿನದಂದು ರಾತ್ರಿ ಪೂಜೆ ನಡೆಯುತ್ತದೆ. ಇದರೊಂದಿಗೆ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ವಾರ್ಷಿಕ ಪೂಜೆ ನಡೆಯುತ್ತದೆ.
ವಿಶೇಷ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹೊರ ಊರುಗಳಿಂದ ಆಗಮಿಸುವುದು ದೇವಾಲಯದ ವಿಶೇಷ. ಉದ್ಯೋಗದಲ್ಲಿರುವವರು ವಿವಾಹವಾಗಿ ಹೊರ ಊರುಗಳಲ್ಲಿ ನೆಲೆಸಿರುವ ಹೆಣ್ಣು ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಹಾಜರಾಗುತ್ತಾರೆ. ವಾರ್ಷಿಕ ಉತ್ಸವ ದಿನದಂದು ಎಲ್ಲ ಸಮುದಾಯದವರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸುವುದು, ಈ ಜಾಗದ ಮತ್ತೊಂದು ವಿಶೇಷ. ಇನ್ನು ಈ ಭಾಗದಲ್ಲಿ ಶುಭ ಕಾರ್ಯಕ್ರಮ ನಡೆಯುವ ಮುನ್ನ ಈ ಗುಡಿಗೆ ಬಂದು ಮೊದಲು ಪೂಜೆ ಸಲ್ಲಿಸುವುದು ವಾಡಿಕೆ. ಇದರಿಂದ ಯಾವುದೇ ವಿಘ್ನ ಸಂಭವಿಸುವುದಿಲ್ಲ ಎಂಬುದು ಭಕ್ತರ ನಂಬಿಕೆ.

ತೆರಳುವ ಮಾರ್ಗ: ಮೈಸೂರಿನಿಂದ ಬರುವವರು ಕುಶಾಲನಗರ ಮೂಲಕ ಬಾಣವಾರ, ಆಲೂರು-ಸಿದ್ದಾಪುರ, ಗೋಪಾಲಪುರ ಮೂಲಕ 120 ಕಿಮೀ ಕ್ರಮಿಸಿದರೆ ಶನಿವಾರಸಂತೆ ಸಿಗುತ್ತದೆ. ಹಾಸನದಿಂದ ಬರುವವರು ಅರಕಲಗೂಡು ಮೂಲಕ ಬಂದರೆ ಶನಿವಾರಸಂತೆ ಸಿಗುತ್ತದೆ. ಮಡಿಕೇರಿ ಮೂಲಕ ಸೋಮವಾರಪೇಟೆ ಹಾಗೂ ಗೌಡಳ್ಳಿ ಮಾರ್ಗವಾಗಿ 65ಕಿಮೀ ಕ್ರಮಿಸಿದರೆ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಾಲಯ ಸಿಗುತ್ತದೆ.

ಸರ್ವ ಧರ್ಮ ಸಮಿತಿ ಕಾರಣ: ಈ ದೇವಾಲಯ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಕಾರಣ ಈ ದೇವಾಲಯದಲ್ಲಿನ ಸರ್ವ ಧರ್ಮ ಸಮಿತಿ. ಎಲ್ಲ ಸಮುದಾಯದವರೂ ಪೂಜಾ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಎಲ್ಲರ ಸಹಕಾರದಿಂದ ದೇವಾಲಯ ಬೆಳವಣಿಗೆಗೆ ಹೊಂದುತ್ತಿದೆ. ಯಾವುದೇ ಸಹಾಯ ಬಯಸಿದರೆ ಯಾರೂ ಇಲ್ಲ ಎನ್ನುವುದಿಲ್ಲ. ಸಮಿತಿಯಲ್ಲಿ ಎಲ್ಲ ಜಾತಿ, ಧರ್ಮದ ಜನರು ಇದ್ದು ಉತ್ತಮ ಸಹಕಾರ ನೀಡುತ್ತಿದ್ದಾರೆ.
ಶರತ್ ಶೇಖರ್ ಸ್ಥಾಪಕ ಅಧ್ಯಕ್ಷ, ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಾಲಯ

ಎಲ್ಲ ಧರ್ಮದವರನ್ನು ಒಂದುಗೂಡಿಸಲೆಂದೇ ಬೀರಲಿಂಗೇಶ್ವರ ಪ್ರಬಲ ಬೈರವಿ ದೇವಾಲಯ ನಿರ್ಮಾಣವಾದಂತಿದೆ. ಇಂತಹ ದೇವಾಲಯ ಪ್ರತಿ ಗ್ರಾಮದಲ್ಲಿ ತಲೆ ಎತ್ತಬೇಕು. ಇದರಿಂದ ಧರ್ಮಗಳ ನಡುವೆ ಸಂಘರ್ಷ ಇರುವುದಿಲ್ಲ. ಧರ್ಮವನ್ನೂ ಮೀರಿ ಇಲ್ಲಿಗೆ ಜನರು ಬರುತ್ತಾರೆ. ಪ್ರಾರಂಭದಲ್ಲಿ ನೀಡಿದ ಸಹಕಾರವನ್ನೂ ಇಂದಿಗೂ ನೀಡಲಾಗುತ್ತಿದೆ.
ಸಾದಿಕ್, ಸಮಿತಿ ಸದಸ್ಯ, ಬೀರಲಿಂಗೇಶ್ವರ ಪ್ರಬಲ ಭೈರವಿ ದೆವಾಲಯ ಸಮಿತಿ

ದೆವಾಲಯಕ್ಕೆ ಬಂದು ಬೇಡಿಕೊಂಡರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು. ಹಾಗಾಗಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲ ಜನಾಂಗದವರು ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿವುದು ಉತ್ತಮ ಬೆಳವಣಿಗೆ.
ಮಹಂತೇಶ್ ಭಟ್ ಅರ್ಚಕ, ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಾಲಯ

2 ಗರ್ಬಗುಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net